ಸುರತ್ಕಲ್ ಟೋಲ್ ಗೇಟ್ ತೆರವುಗೊಂಡ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಿಲು ಹೋರಾಟ ಸಮಿತಿ ಆಗ್ರಹ

Update: 2024-01-16 05:09 GMT

ಸುರತ್ಕಲ್, ಜ.16: ಸುರತ್ಕಲ್ ಟೋಲ್ ಗೇಟ್ ತೆರವುಗೊಂಡ ಸ್ಥಳದಲ್ಲಿ ರಸ್ತೆ ಅಪಘಾತ ತಡೆಯಲು ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕೆಂದು ಟೋಲ್ ಗೇಟ್‌ ಹೋರಾಟ ಸಮಿತಿಯು ಸಂಚಾರ ಪೊಲೀಸ್ ಇಲಾಖೆ ಮನವಿ ಸಲ್ಲಿಸಿ ಆಗ್ರಹಿಸಿದೆ.

ನಾಗರಿಕ ಸಂಘಟನೆಗಳ ಸತತ ಹೋರಾಟದ ಫಲವಾಗಿ ಮುಚ್ಚಲ್ಪಟ್ಟ ಎನ್ಐಟಿಕೆ ಸಮೀಪದ ಸುರತ್ಕಲ್ ಟೋಲ್ ಗೇಟ್ ನ ನಿರುಪಯೋಗಿ ಅವಶೇಷಗಳು ತೆರವುಗೊಳ್ಳದೆ ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಅಪಘಾತಗಳು ಸಂಭವಿಸಿದ್ದವು. ಈ ಕುರಿತು ಹೋರಾಟ ಸಮಿತಿ ಹಲವು ಭಾರಿ ಗಮನ ಸೆಳೆದಿತ್ತು. ಸಂಚಾರ ಪೊಲೀಸ್ ಇಲಾಖೆಯೂ ರಸ್ತೆ ಸಂಚಾರಕ್ಕೆ ಅಡಚಣೆ, ಅಪಘಾತಗಳು ಸಂಭವಿಸುತ್ತಿರುವ ಕುರಿತು ಜಿಲ್ಲಾಡಳಿತಕ್ಕೆ ವರದಿ ನೀಡಿರುವ ಕುರಿತು ಹೋರಾಟ ಸಮಿತಿಗೆ ಮಾಹಿತಿ ಲಭ್ಯವಾಗಿದೆ.

ಎಲ್ಲಾ ಪ್ರಯತ್ನಗಳ‌ಫಲವಾಗಿ ಹೆದ್ದಾರಿ ಪ್ರಾಧಿಕಾರ ಟೋಲ್ ಗೇಟ್ ಅವಶೇಷಗಳನ್ನು ತೆರವುಗೊಳಿಸುತ್ತಿದೆ. ಟೋಲ್ ಗೇಟ್ ತೆರವುಗೊಳಿಸಿದ ಜಾಗದಲ್ಲಿ ಪಿಲ್ಲರ್ ಗಳು ಅಳವಡಿಸಿದ ಕಾಂಕ್ರೀಟ್ ದಂಡೆಗಳು ಹಾಗೆಯೆ ಉಳಿದಿವೆ. ಇವುಗಳ ತೆರವು ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಕೆಲವು ದಿನಗಳು ಬೇಕಾಗಬಹುದು. ಆದರೆ, ಟೋಲ್ ಗೇಟ್ ತೆರವುಗೊಂಡ ಸ್ಥಳದಲ್ಲಿ ರಸ್ತೆ ದೀಪಗಳು, ಕಾಂಕ್ರೀಟ್ ದಂಡೆಗಳಲ್ಲಿ ಪ್ರತಿಫಲನ ಸ್ಟಿಕ್ಕರ್ ಗಳು ಇಲ್ಲದಿರುವುದರಿಂದ ಈ ಪ್ರದೇಶ ಈಗ ವಾಹನ ಸವಾರರ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿ ಮಾರ್ಪಟ್ಟಿದೆ.

ಕತ್ತಲಾವರಿಸಿದ ತರುವಾಯ ವಾಹನ ಸವಾರರಿಗೆ ಅನಿರೀಕ್ಷಿತವಾಗಿ ಎದುರಾಗುವ ಈ ಕಾಂಕ್ರೀಟ್ ದಂಡೆಗಳು ತಕ್ಷಣಕ್ಕೆ ಗೋಚರಿಸದೆ ಅಪಘಾತಗಳ ಸರಣಿಯೆ ಸಂಭವಿಸುವ ಭೀತಿ ಎದುರಾಗಿದೆ. ಆದುದರಿಂದ ಭೀಕರ ಅಪಘಾತಗಳು, ಅನಾಹುತಗಳು ಸಂಭವಿಸುವುದನ್ನು ತಡೆಯಲು ಇಲ್ಲಿ ತಕ್ಷಣವೇ ಬೆಳಕಿನ ವ್ಯವಸ್ಥೆ, ರಸ್ತೆ ಮದ್ಯೆ ಇರುವ ದಂಡೆಗಳಿಗೆ ಪ್ರತಿಫಲನ ಸ್ಟಿಕ್ಕರ್ ಗಳನ್ನು ಅಂಟಿಸುವ ವ್ಯವಸ್ಥೆಗಳನ್ನು ಮಾಡಲು ಸಂಬಂಧ ಪಟ್ಟವರಿಗೆ ಸೂಚಿಸಬೇಕು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪೊಲೀಸ್ ಇಲಾಖೆಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ‌.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News