ಎಚ್ಚರ ತಪ್ಪಿದರೆ ಡೆಂಗಿ ಮಾರಣಾಂತಿಕ: ಡಾ.ತಿಮ್ಮಯ್ಯ

Update: 2024-07-04 08:32 GMT

ಮಂಗಳೂರು: ಆಗಾಗ್ಗೆ ಬಿಟ್ಟು ಸುರಿಯುವ ಮಳೆ ಡೆಂಗಿ ಹಾಗೂ ಚಿಕನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳನ್ನು ಹರಡುವ ಈಡೀಸ್ ಸೊಳ್ಳೆ ಉತ್ಪತ್ತಿಗೆ ಪೂರಕ ಸಮಯವಾಗಿರುತ್ತದೆ. ಚಿಕನ್ ಗುನ್ಯಾ ಮಾರಣಾಂತಿಕವಲ್ಲದಿದ್ದರೂ, ಡೆಂಗಿ ಜ್ವರದ ಸಂದರ್ಭ ಎಚ್ಚರ ತಪ್ಪಿದರೆ ಮಾರಣಾಂತಿಕವಾಗಿ ಕಾಡಬಲ್ಲದು ಎಂದು ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಎಚ್ಚರಿಕೆ ನೀಡಿದ್ದಾರೆ.

‘ವಾರ್ತಾಭಾರತಿ’ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಡೆಂಗಿ ಹಾಗೂ ಚಿಕನ್‌ಗುನ್ಯಾ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರಿಕೆ ವಹಿಸುವುದೇ ಈ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ದಾರಿ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಜೊತೆಯಲ್ಲೇ ಜ್ವರದ ಪ್ರಕರಣಗಳೂ ಹೆಚ್ಚಾಗುತ್ತಿವೆ. ಈಗಾಗಲೇ 266 ಸಕ್ರಿಯ ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಸೊಳ್ಳೆ ನಿಯಂತ್ರಣ ಕ್ರಮಗಳು ಅಗತ್ಯವಾಗಿದ್ದು, ಎಲ್ಲಾ ತಾಲೂಕು ಹಾಗೂ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಾರ್ವಾ ನಾಶದ ಸಕ್ರಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ಪ್ರಥಮ ಹಾಗೂ ಮೂರನೇ ಶುಕ್ರವಾರ ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶ ಪಡಿಸುವ ಕಾರ್ಯ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ಲಾರ್ವಾ ಉತ್ಪತ್ತಿ ತಾಣಗಳನ್ನು ಪತ್ತೆ ಹಚ್ಚಿ, ಸಾರ್ವಜನಿಕರಿಗೆ ಅರಿವು ಮೂಡಿಸಿ ನಾಶ ಪಡಿಸುವ ಕಾರ್ಯ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಈ ಬಗ್ಗೆ ಕ್ಷೇತ್ರ ಮಟ್ಟದಲ್ಲಿ ಅರಿವು ಮೂಡಿಸುವುದು, ಲಾರ್ವಾ ಸಮೀಕ್ಷೆ ಕಾರ್ಯ ನಡೆಸುತ್ತಿದ್ದಾರೆ.

ಸಾರ್ವಜನಿಕರು ಜಿಲ್ಲಾಡಳಿತದ ಸಹಕಾರದಲ್ಲಿ ಅಂತರ್ ಇಲಾಖಾ ಸಮನ್ವಯ ಸಮಿತಿ ಮಾಡಿ ಕ್ರಮ ವಹಿಸುತ್ತಿದ್ದಾರೆೆ. ಗುಜುರಿ ವ್ಯಾಪಾರ ಮಾಡುವವರು ಬೀದಿ ಬದಿ ಅಂತಹ ವಸ್ತುಗಳನಿಟ್ಟವರು, ತ್ಯಾಜ್ಯ ವಸ್ತುಗಳನ್ನು ಛಾವಣಿ ನಿರ್ಮಿಸಿ, ನೀರು ನಿಲ್ಲದಂತೆ ಎಚ್ಚರಿಕೆ ವಹಿಬೇಕು. ಇದರಿಂದ ಸೊಳ್ಳೆ ಉತ್ಪತ್ತಿ ಆಗುವುದನ್ನು ತಡೆಯಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಚಿಕನ್‌ಗುನ್ಯಾ ಮಾರಣಾಂತಿಕ ಅಲ್ಲ: ಚಿಕನ್‌ಗುನ್ಯಾ ಈ ವರ್ಷ ಅಷ್ಟಾಗಿ ಕಂಡುಬಂದಿಲ್ಲ. ಚಿಕನ್‌ಗುನ್ಯಾ ಮಾರಾಣಾಂತಿಕ ಅಲ್ಲ. ತುಂಬಾ ಜ್ವರ, ಮೈಕೈ ಜೋನು, ಕೀಲು ನೋವಿರುತ್ತದೆ. ಒಂದು ವಾರ ಜ್ವರ ಇರುತ್ತದೆ. ಮೈಕೈ ನೋವು, ಕೀಲು ನೋವು ಇರುತ್ತದೆ. ಆದರೂ, ಮರಣ ಸಂಭವಿಸಿದ ದಾಖಲೆ ವೈದ್ಯಕೀಯ ಇತಿಹಾಸದಲ್ಲಿ ಇಲ್ಲ. ಜ್ವರ ಬಂದಾಗ ಸಮೀಪದ ವೈದ್ಯರನ್ನು ಸಂಪರ್ಕಿಸಿ ಸಂಪೂರ್ಣ ವಿಶ್ರಾಂತಿ, ದ್ರವರೂಪದ ಆಹಾರ ಸೇವಿಸುವುದು ಅತೀ ಅಗತ್ಯ. ನಿರ್ಜಲೀಕರಣ ಆಗದಂತೆ ಕ್ರಮ ವಹಿಸಬೇಕು ಎಂದು ಅವರು ವಿವರ ನೀಡಿದರು.

ಸ್ವಚ್ಛ ನೀರಿನಲ್ಲಿ ಈಡಿಸ್ ಸೊಳ್ಳೆ ಲಾರ್ವಾ ಉತ್ಪತ್ತಿ: ಡೆಂಗಿ ರೋಗ ಹರಡುವ ಈಡೀಸ್ ಸೊಳ್ಳೆ ತಿಳಿಯಾದ ಹಾಗೂ ಸ್ವಚ್ಛ ನೀರಿನಲ್ಲಿ ತನ್ನ ವಂಶಾಭಿವೃದ್ಧಿ ಮಾಡುತ್ತದೆ. ಮನೆಯ ಹೊರ ಆವರಣದಲ್ಲಿ ನಾವು ಬಿಸಾಕುವ ತೆಂಗಿನ ಚಿಪ್ಪು, ಸೀಯಾಳದ ಚಿಪ್ಪು, ಇತರೆ ಕಪ್, ಟಯರ್, ಟ್ಯೂಬ್, ಹೂವಿನ ಕುಂಡಗಳಲ್ಲಿ ಈ ಸೊಳ್ಳೆ ಮೊಟ್ಟೆ ಇಡುತ್ತವೆ. ಮನೆಯೊಳಗೆ ಅಲಂಕಾರಿಕ ಗಿಡಗಳ ತಟ್ಟೆ ಕೂಡ ನೀರು ನಿಂತು ಸೊಳ್ಳೆ ಮೊಟ್ಟೆ ಉತ್ಪತ್ತಿಯ ತಾಣವಾಗಿರುತ್ತದೆ. ಎಸಿ, ಕೂಲರ್, ರೆಫ್ರಿಜರೇಟರ್‌ನ ಹಿಂಭಾಗ, ಮನೆಯಲ್ಲಿ ನೀರು ಶೇಖರಿಸುವ ಪಾತ್ರೆಗಳಲ್ಲಿಯೂ ಹನಿ ಗಾತ್ರದ ನೀರು ಸಂಗ್ರಹವಿದ್ದಲ್ಲಿಯೂ ಈಡೀಸ್ ಸೊಳ್ಳೆ ಮೊಟ್ಟೆ ಇಟ್ಟು ತನ್ನ ವಂಶಾಭಿವೃದ್ಧಿ ಮಾಡಿಕೊಳ್ಳಬಲ್ಲದು.

ಈಡಿಸ್ ಸೊಳ್ಳೆ 15 ಬಾರಿ ಮೊಟ್ಟೆ ಇಡಬಲ್ಲದು 

ಈಡಿಸ್ ಸೊಳ್ಳೆ ತನ್ನ 28ರಿಂದ 30 ದಿನಗಳ ಜೀವಿತ ಅವಧಿಯಲ್ಲಿ 14ರಿಂದ 15 ಬಾರಿ ಮೊಟ್ಟೆ ಇಡಬಲ್ಲದು. ಒಂದು ಬಾರಿಗೆ 200ರಿಂದ 300 ಮೊಟ್ಟೆ ಇಡುವ ಈಡಿಸ್ ಸೊಳ್ಳೆ ಅತ್ಯಲ್ಪ ಅವಧಿಯಲ್ಲಿಯೇ ಅಸಂಖ್ಯಾತವಾಗಿ ಅಭಿವೃದ್ಧಿಗೊಂಡು, ಸೋಂಕು ಹರಡ ಬಲ್ಲವು. ಅದಕ್ಕಾಗಿ ಸಾರ್ವಜನಿಕರು ಇಲಾಖೆ ಯೊಂದಿಗೆ ಕೈಜೋಡಿಸಬೇಕು. ಸೊಳ್ಳೆ ಉತ್ಪತ್ತಿ ಆಗದಂತೆ ಕ್ರಮ ವಹಿಸುವುದೇ ಪ್ರಮುಖ ನಿಯಂತ್ರೋಣಾಪಾಯ. ಜಿಲ್ಲೆಯಲ್ಲಿ ಈಗಾಗಲೇ ಆರೋಗ್ಯ ಇಲಾಖೆ ವತಿಯಿಂದ ಪ್ರತಿ ಶುಕ್ರವಾರ ಸೊಳ್ಳೆಗಳ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಚಟುವಟಿಕೆ ಆರಂಭ ಗೊಂಡಿದೆ ಎಂದು ಡಾ.ಎಚ್.ಆರ್.ತಿಮ್ಮಯ್ಯ ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News