ಬೆಂಗಳೂರಿನ ಮುಷ್ಕರದಲ್ಲಿ ದ.ಕ.ಜಿಲ್ಲೆಯ ಬಿಸಿಯೂಟ ನೌಕರರು ಭಾಗಿ: ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಶಿಕ್ಷಣ ಇಲಾಖೆ ಕ್ರಮ

Update: 2023-11-07 21:47 IST
ಬೆಂಗಳೂರಿನ ಮುಷ್ಕರದಲ್ಲಿ ದ.ಕ.ಜಿಲ್ಲೆಯ ಬಿಸಿಯೂಟ ನೌಕರರು ಭಾಗಿ: ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಶಿಕ್ಷಣ ಇಲಾಖೆ ಕ್ರಮ
  • whatsapp icon

ಮಂಗಳೂರು : ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ದ.ಕ. ಜಿಲ್ಲೆಯ ಬಿಸಿಯೂಟ ನೌಕರರು ಮಂಗಳವಾರ ಭಾಗಿಯಾಗಿದ್ದಾರೆ.

ನೌಕರರು ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡರೂ ಕೂಡ ಶಿಕ್ಷಣ ಇಲಾಖೆಯು ಮುನ್ನೆಚ್ಚರಿಕಾ ಕ್ರಮ ವಹಿಸಿದ ಕಾರಣ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಸಮಸ್ಯೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಶಾಲಾಭಿವೃದ್ಧಿ ಸಮಿತಿ ಮತ್ತು ತಾಯಂದಿರ ಸಮಿತಿಯು ಸಕಾಲಕ್ಕೆ ಬಿಸಿಯೂಟ ತಯಾರಿಸಿ ವಿದ್ಯಾರ್ಥಿಗಳಿಗೆ ನೀಡಿದ ಕಾರಣ ಬಿಸಿಯೂಟ ನೌಕರರ ಮುಷ್ಕರವು ವಿದ್ಯಾರ್ಥಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನಲಾಗಿವೆ. ಬುಧವಾರದಿಂದ ನೌಕರರು ಎಂದಿನಂತೆ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಆರೋಗ್ಯ ವಿಮೆ, ಮರಣ ಪರಿಹಾರ, ಗಾಯಗಳಾದರೆ ಆಸ್ಪತ್ರೆ ಖರ್ಚು ವೆಚ್ಚ ಸರಕಾರ ಭರಿಸಬೇಕು, ಮಾಸಿಕ ಗೌರವಧನ ಏರಿಕೆ ಸೇರಿದಂತೆ 16 ವಿವಿಧ ಬೇಡಿಕೆಗಳನ್ನು ಈಡೇರಿಸಲು ನಡೆಯುತ್ತಿರುವ ಹೋರಾಟದಲ್ಲಿ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ನೌಕರರು ಭಾಗವಹಿಸಿದ್ದಾರೆ ಎಂದು ಸಿಐಟಿಯು ಮುಖಂಡ ವಸಂತ ಆಚಾರಿ ಮಾಹಿತಿ ನೀಡಿದ್ದಾರೆ.

ಬಿಸಿಯೂಟ ನೌಕರರಿಗೆ ಮಾಸಿಕ ಗೌರವ ಧನ 1,000 ರೂ. ಏರಿಕೆ ಮಾಡುವ ಬಗ್ಗೆ ರಾಜ್ಯ ಸರಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಕಾಂಗ್ರೆಸ್ ಈ ಹಿಂದೆ ಚುನಾವಣೆ ಸಂದರ್ಭ 6,000 ರೂ. ವೇತನ ನೀಡಲಾಗುವುದು ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಹಾಗಾಗಿ ರಾಜ್ಯ ಸರಕಾರ ತಕ್ಷಣ ಈ ಯೋಜನೆಯನ್ನು ಜಾರಿ ಮಾಡ ಬೇಕು, 60 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 6,000 ಬಿಸಿಯೂಟ ನೌಕರರಿಗೆ ಯಾವುದೇ ಪರಿಹಾರ, ಭತ್ತೆ ನೀಡದೆ ನಿವೃತ್ತಿಗೊಳಿಸಲಾಗಿದೆ. ಅವರಿಗೆ ಸೂಕ್ತ ಪರಿಹಾರ ನೀಡಬೇಕು ವಸಂತ ಆಚಾರಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News