ದ.ಕ.ಜಿಲ್ಲೆ| ಪೊಲೀಸ್-ಗೃಹರಕ್ಷಕ ದಳದ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
ಮಂಗಳೂರು: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯು ನೀಡುವ ರಾಷ್ಟ್ರಪತಿಯ ಶ್ಲಾಘನೀಯ ಸೇವಾ ಪದಕಕ್ಕೆ ದ.ಕ.ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಇಬ್ಬರು ಅಧಿಕಾರಿಗಳು ಆಯ್ಕೆಯಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಎಸಿಪಿ ಆಗಿರುವ ರವೀಶ್ ಎಸ್. ನಾಯಕ್ ಮತ್ತು ಗೃಹರಕ್ಷಕ ದಳದಲ್ಲಿ ಜಿಲ್ಲಾ ಕಮಾಂಡೆಂಟ್ ಆಗಿರುವ ಡಾ. ಮುರಳೀ ಮೋಹನ್ ಚೂಂತಾರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಆ.೧೫ರಂದು ಬೆಂಗಳೂರಿನಲ್ಲಿ ನಡೆ ಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
*ರವೀಶ್ ನಾಯಕ್: 2001ರಲ್ಲಿ ಎಸ್ಸೈ ಆಗಿ ಇಲಾಖೆಗೆ ಸೇರ್ಪಡೆಗೊಂಡಿರುವ ರವೀಶ್ ಎಸ್.ನಾಯಕ್ ಬಿಜಾಪುರದಲ್ಲಿ ಕರ್ತವ್ಯ ಆರಂಭಿಸಿದ್ದರು. ಇನ್‌ಸ್ಪೆಕ್ಟರ್ ಆಗಿ ಗುಲ್ಪರ್ಗಾ ಮತ್ತು ಯಾದಗಿರಿ, ಮಂಗಳೂರು ಗ್ರಾಮಾಂತರ ಠಾಣೆ, ಇಮಿಗ್ರೇಷನ್, ಸಿಎಸ್‌ಪಿ ಉಡುಪಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2021ರಲ್ಲಿ ಭಡ್ತಿ ಹೊಂದಿ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಿಸಿಆರ್‌ಬಿ ವಿಭಾಗದ ಎಸಿಪಿಯಾಗಿ ನಿಯುಕ್ತಿಯಾದರು. ಸದ್ಯ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
*ಡಾ.ಮುರಳೀ ಮೋಹನ ಚೂಂತಾರು: ಸುಮಾರು ಒಂಬತ್ತುವರೆ ವರುಷಗಳಿಂದ ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟನಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಮುರಳೀ ಮೋಹನ ಚೂಂತಾರು ಈವರೆಗೆ ತನ್ನ ಕರ್ತವ್ಯಕ್ಕೆ ಯಾವುದೇ ವೇತನ ಪಡೆಯದಿರುವುದು ವಿಶೇಷ. ಡಾ. ಮುರಳೀ ಮೋಹನ ಚೂಂತಾರು ವೈದ್ಯರೂ, ಲೇಖಕ, ಅಂಕಣಕಾರರೂ ಆಗಿದ್ದಾರೆ.