ಡಿ.ಕೆ.ಸುರೇಶ್ ಗೆ ಚುನಾವಣೆಯಲ್ಲಿ ಆಸಕ್ತಿ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-06-25 05:23 GMT

ಮಂಗಳೂರು, ಜೂ.25: ತಮ್ಮ ಡಿ.ಕೆ.ಸುರೇಶ್ ರಿಗೆ ಚುನಾವಣೆಯಲ್ಲಿ ಆಸಕ್ತಿ ಇಲ್ಲ. ಜನ ನಮಗೆ ವಿಶ್ರಾಂತಿ ಸೂಚಿಸಿದ್ದಾರೆ. ಆದರೆ, ಪಕ್ಷದ ಕೆಲಸ ಮಾಡಬೇಕೆಂಬ ಆಸೆ ಇದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಸಲುವಾಗಿ ಇಂದು ಬೆಳಗ್ಗೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.

ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಮಗೆ 85 ಸಾವಿರ ಜನ ಮತ ಕೊಟ್ಟಿದ್ದಾರೆ. ಎಂದಿಗೂ ಆ ಜನರನ್ನು ಬಿಡಲಾಗದು. ದೇವರು ನಮಗೆ ಈಗ ಅಧಿಕಾರ ಕೊಟ್ಟಿದ್ದಾರೆ. 136 ಸೀಟ್ ಕೊಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳಬೇಕು. ಚನ್ನಪಟ್ಟಣ ಜನಕ್ಕೆ ಏನೂ ಆಗಿಲ್ಲ ಎಂಬ ಭಾವನೆ ಇದೆ. ನಾವು ಒಂದಿಷ್ಟು ಅಳಿಲು ಸೇವೆ ಮಾಡಬೇಕು ಎಂದು ಉದ್ದೇಶಿಸಿದ್ದೇವೆ. ಅದಕ್ಕೆಇದೀಗ ಸರಿಯಾದ ಸಮಯ ಎಂದರು.

ಎಚ್.ಡಿ.ಕುಮಾರಸ್ವಾಮಿ ಬಹಳ ಲೇಟಾಗಿ ರಾಜಕಾರಣಕ್ಕೆ ಬಂದವರು. ನಾನು 1985ರಲ್ಲೇ ವಿಧಾನಸಭಾ ಚುನಾವಣೆಗೆ ನಿಂತೆ. ಅವರು 1995ರ ನಂತರ ರಾಜಕಾರಣಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು ಎಂದು ಡಿಕೆಶಿ ಹೇಳಿದರು.

ಹೆಚ್ಚಿನ ಡಿಸಿಎಂ ಸ್ಥಾನಗಳಿಗೆ ಬೇಡಿಕೆ ಸೃಷ್ಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ನೀವು ಪ್ರತಿ ದಿನ ಸುದ್ದಿ ಪ್ರಕಟ ಮಾಡುತ್ತಿದ್ದೀರಲ್ಲ, ಅದರಿಂದ ಖುಷಿಯಾಗುವವರಿಗೆ ಆಗಲಿ. ಯಾರು ಏನು ಬೇಕಿದ್ದರೂ ಬೇಡಿಕೆ ಇಡಲಿ. ಪಕ್ಷ ಯಾರಿಗೆ ಏನು ಉತ್ತರ ಕೊಡಬೇಕೋ ಕೊಡುತ್ತದೆ ಎಂದರು.

ಕುಮಾರಸ್ವಾಮಿ ಬಳ್ಳಾರಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿಗೆ ಎಷ್ಟು ಜ್ಞಾನ ಇದೆ ಅಥವಾ ಇಲ್ಲವಾ ಗೊತ್ತಿಲ್ಲ. ನನಗಂತು ಏನೂ ಗೊತ್ತಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News