ಅಣಕು ಕಾರ್ಯಾಚರಣೆಯಲ್ಲಿ ಸುರಕ್ಷತಾ ಕ್ರಮಕೈಗೊಳ್ಳಲು ದ.ಕ. ಜಿಲ್ಲಾಧಿಕಾರಿ ಸಲಹೆ

Update: 2023-07-24 17:21 GMT

ಮಂಗಳೂರು: ಅಣಕು ಕಾರ್ಯಚರಣೆಯಲ್ಲಿ ಯಾವುದೇ ರೀತಿಯ ಆಪತ್ತುಗಳು ಎದುರಾಗದಂತೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.

ಬಜ್ಪೆಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜು.೩೧ರಂದು ಆಯೋಜಿಸಲಾದ ವಿಮಾನ ದುರಂತದ ಜಂಟಿ ಅಣಕು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲಾಡಳಿತ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಅದಾನಿ ವಿಮಾನ ನಿಲ್ದಾಣದ ಸಹಭಾಗಿತ್ವದಲ್ಲಿ ಅಂದು ಪೂ.೧೧ರಿಂದ ೧೨ ರೊಳಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಲಿರುವ ವಿಮಾನ ದುರಂತದ ಅಣಕು ಪ್ರದರ್ಶನದಲ್ಲಿ ಸೋಡಿಯಂ ಆಸಿಟೇಡ್ ಎಂಬ ರಾಸಾಯನಿಕವನ್ನು ಹೊತ್ತು ತರುವ ಇಂಡಿಗೋ ಡೋಮೆಸ್ಟಿಕ್ ವಿಮಾನವು ಅಪಘಾತಕ್ಕೆ ಈಡಾಗಲಿದೆ. ಈ ಸಂದರ್ಭ ವಿಮಾನದಿಂದ ಸೋರಿಕೆ ಯಾಗುವ ಸೋಡಿಯಂ ಅಸಿಟೇಡ್ ರಾಸಾಯನಿಕದಿಂದಾಗಿ ಸಮೀಪದಲ್ಲಿರುವ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಯಾವುದೇ ರೀತಿಯ ಅನಾಹುತವಾಗದಂತೆ ಕೈಗೊಳ್ಳಬೇಕಾದ ಕ್ರಮಗಳು, ಆ್ಯಂಬುಲೆನ್ಸ್, ಸಮೀಪದ ಆಸ್ಪತ್ರೆಗಳು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಸಹಿತ ಸುರಕ್ಷಿತ ಆಶ್ರಯ ತಾಣಗಳು, ಆಸ್ಪತ್ರೆಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವುದಲ್ಲದೆ ಈ ಬಗ್ಗೆ ಗ್ರಾಮಸ್ಥರು, ಶಾಲೆಗೆ ಮುನ್ಸೂಚನೆ ನೀಡುವಂತೆ ಡಿಸಿ ಸೂಚಿಸಿದರು.

ಈ ಅಣಕು ಕಾರ್ಯಾಚರಣೆಯಲ್ಲಿ ಪೊಲೀಸ್, ಅಗ್ನಿಶಾಮಕ ದಳ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಸಹಿತ ಎಲ್ಲಾ ಇಲಾಖೆಗಳು ಸಕ್ರಿಯವಾಗಿ ಭಾಗವಹಿಸಲಿದೆ. ಜಿಲ್ಲಾಡಳಿತದಿಂದ ಅಗತ್ಯ ನೆರವು ನೀಡಲಾಗುವುದು ಎಂದರು.

ಸಿಐಎಸ್‌ಎಫ್‌ನ ಸೀನಿಯರ್ ಕಮಾಂಡೆಂಟ್ ವಿ.ಎಂ. ಜೋಶಿ, ಅದಾನಿ ವಿಮಾನ ನಿಲ್ದಾಣದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬಾಯ್ಲರ್ಸ್ ಮತ್ತು ಕಾರ್ಖಾನೆಗಳ ಉಪನಿರ್ದೇಶಕ ಡಾ. ರಾಜೇಶ್ ಮಿಶ್ರಿಕೋಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಅಗ್ನಿಶಾಮಕ ಇಲಾಖೆಯ ಮುಖ್ಯಸ್ಥ ಭರತ್ ಕುಮಾರ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಕಂದಾಯ ನಿರೀಕ್ಷಕ ಪೂರ್ಣಚಂದ್ರ ತೇಜಸ್ವಿ, ಸಿಐಎಸ್‌ಎಫ್, ಎನ್‌ಡಿಆರರ್‌ಎಫ್, ಎಸ್‌ಡಿಆರ್‌ಎಫ್, ಭಾರತೀಯ ನೌಕಾಪಡೆಯ ಅಧಿಕಾರಿಗಳು ಸಭೆಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News