ಮಂಗಳೂರು ಮೀನು ದಕ್ಕೆ ಮೀಲಾದ್ ರಜೆ ಬಗ್ಗೆ ಗೊಂದಲ ಬೇಡ: ಕೆ. ಅಶ್ರಫ್

Update: 2023-09-25 14:08 GMT

ಕೆ.ಅಶ್ರಫ್

ಮಂಗಳೂರು, ಸೆ.25: ನಗರದ ಬಂದರ್ ದಕ್ಕೆಯಲ್ಲಿ ಪ್ರತೀ ವರ್ಷದಂತೆ ತನ್ನ ಮತ್ತು ಇತರ ಸಂಘಗಳ ಸಭೆಯ ನಿರ್ಣಯ ದಂತೆ ಹಸಿ ಮೀನು ವ್ಯಾಪಾರಸ್ಥರ ಸಂಘದ ಸದಸ್ಯರು ಸ್ವಯಂ ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ ಹಬ್ಬದ ದಿನ ಗಳಲ್ಲಿ ವ್ಯವಹಾರಕ್ಕೆ ಕಡ್ಡಾಯ ರಜೆ ಹೊಂದುವುದು ಪೂರ್ವ ನಿರ್ಧರಿತ ಪದ್ಧತಿಯಾಗಿದೆ. ಈ ಬಗ್ಗೆ ಯಾವುದೇ ಗೊಂದಲಕ್ಕೆ ಆಸ್ಪದ ಬೇಡ ಎಂದು ಮಂಗಳೂರು ಹಸಿ ಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಬಾರಿ ಸೆ.28ರಂದು ಮೀಲಾದುನ್ನೆಬಿ ಆಚರಣೆಯ ಪ್ರಯುಕ್ತ ಕಡ್ಡಾಯ ರಜೆ ಪಾಲಿಸುವ ಬಗ್ಗೆ ವಿವಿಧ ಸಂಘಗಳಲ್ಲಿ ನಿರ್ಣಯಿಸಿದಂತೆ ಪ್ರಕಟಣೆ ಫಲಕ (ಫ್ಲೆಕ್ಸ್) ಅಳವಡಿಸಲಾಗಿರುತ್ತದೆ. ಪ್ರತೀ ವರ್ಷ ಇತರ ಹಬ್ಬಗಳಾದ ಬಾರ್ಕೂರು ಪೂಜೆ, ಉಚ್ಚಿಲ ಪೂಜೆ, ಗಣೇಶ ಚತುರ್ಥಿ, ಈದುಲ್ ಫಿತರ್, ಬಕ್ರೀದ್, ಮೀಲಾದುನ್ನೆಬಿ, ಗುಡ್‌ಫ್ರೈಡೆ, ಕ್ರಿಸ್ಮಸ್ ಇತ್ಯಾದಿ ಶುಭದಿನ ಗಳಲ್ಲಿ ಕೂಡಾ ಸಂಘಗಳ ನಿರ್ಣಯದಂತೆ ಮಾರಾಟಗಾರರು ಕಡ್ಡಾಯ ರಜೆ ಹೊಂದಿ ಆ ದಿನದ ಮಟ್ಟಿಗೆ ಮೀನುಗಾರಿಕಾ ಮಾರಾಟ ಚಟುವಟಿಕೆ ಸ್ಥಗಿತ ಗೊಳಿಸುವುದು ಅನೇಕ ವರ್ಷಗಳಿಂದ ನಡೆದು ಕೊಂಡು ಬಂದ ಕ್ರಮವಾಗಿದೆ. ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಯಲ್ಲಿ ಹಸಿ ಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘ, ಪರ್ಶಿಯನ್ ಬೋಟ್ ಯೂನಿಯನ್, ಟ್ರಾಲ್ ಬೋಟ್ ಯೂನಿಯನ್, ಫಿಶ್ ಬಯ್ಯರ್ಸ್ ಅಸೋಸಿಯೇಶನ್ ಮತ್ತಿತರ ಸಂಘಗಳು ಸಂಯುಕ್ತವಾಗಿ ಈ ರಜೆಗಳನ್ನು ನಿರ್ಧರಿಸಿವೆ.

ಆದರೆ ಮೀಲಾದ್ ರಜೆಯ ಬಗ್ಗೆ ಅಳವಡಿಸಲಾದ ಪ್ರಕಟನಾ ಫಲಕ (ಫ್ಲೆಕ್ಸ್)ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಕೆಲವರು ತಪ್ಪು ಗ್ರಹಿಕೆಯ ಪ್ರಚೋದನಾತ್ಮಕ ಮಾಹಿತಿ ಹಂಚುತ್ತಿರುವುದು ವಿಷಾದನೀಯ. ಸಾರ್ವಜನಿಕರು ಈ ಬಗ್ಗೆ ಗೊಂದಲಕ್ಕೆ ಒಳಗಾಗಬಾರದು ಎಂದು ಅಶ್ರಫ್ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News