ಡೆಂಗಿ ನಿಯಂತ್ರಣಕ್ಕೆ ತಜ್ಞರ ಸಮಿತಿ: ಮೇಯರ್

Update: 2024-07-09 10:09 GMT

ಮಂಗಳೂರು, ಜು. 9: ನಗರದ ಹಲವು ವಾರ್ಡ್‌ಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗ ಹರಡಂತೆ ಸಮರ್ಪಕ ಹಾಗೂ ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ತಜ್ಞ ವೈದ್ಯರ ನೇತೃತ್ವದ ಸಮಿತಿ ರಚನೆಗೆ ಮಂಗಳೂರು ಮಹಾನಗರ ಪಾಲಿಕೆ ನಿರ್ಣಯಿಸಿದೆ.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಡೆಂಗಿ ಹಾವಳಿ ಕುರಿತಂತೆ ಆಡಳಿತ ಹಾಗೂ ವಿಪಕ್ಷ ಸದಸ್ಯರು ತೀವ್ರ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ನೇತೃತ್ವದಲ್ಲಿ ತಜ್ಞ ವೈದ್ಯರು, ವೈದ್ಯಕೀಯ ಕಾಲೇಜುಗಳು, ಸಂಘ ಸಂಸ್ಥೆಗಳು, ಆಶಾ ಕಾರ್ಯಕರ್ತೆಯರು, ಎಂಪಿಡಬ್ಲ್ಯು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡು ಸಮಿತಿ ರಚಿಸಿ, ಪತ್ತೆಯಾಗುವ ಡೆಂಗಿ ಪ್ರಕರಣಗಳನ್ನು ಸದಸ್ಯರ ಗಮನಕ್ಕೆ ತಂದು ತುರ್ತು ಕ್ರಮ ವಹಿಸುವುದು. ಜತೆಗೆ ಪ್ರತಿ ವಾರ್ಡ್‌ಗೊಂದು ಸಮಿತಿ ರಚಿಸಿ ಲಾರ್ವಾ ಪತ್ತೆ, ಫಾಗಿಂಗ್ ಮತ್ತು ಡೆಂಗಿ ಲಕ್ಷಣ ಕಂಡು ಬರುವ ರೋಗಿಗಳ ತಪಾಸಣೆಗೆ ಕ್ರಮ ಕೈಗೊಳ್ಳಲಾಗುವುದು. ಮನಪಾದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಕಮಾಂಡ್ ಕಂಟ್ರೋಲ್‌ಗೆ ಪೂರಕವಾಗಿ ಹಿಂದೆ ಚಾಲ್ತಿಯಲ್ಲಿದ್ದ ಆ್ಯಪ್ ಅಭಿವೃದ್ಧಿ ಪಡಿಸಿಕೊಂಡು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವ ಕಾರ್ಯ ಮಾಡಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.

ಇದಕ್ಕೂ ಮೊದಲು ಮಾತನಾಡಿದ ಮನಪಾ ಸದಸ್ಯ ಎ.ಸಿ. ವಿನಯರಾಜ್, ನಗದಲ್ಲಿ 2014ರಲ್ಲಿ ಮಲೇರಿಯಾ ಉಲ್ಬಣಗೊಂಡಾಗ ತಜ್ಞ ವೈದ್ಯರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಆ್ಯಪ್ ಮೂಲಕ ಕಾರ್ಯಾಚರಣೆ ನಡೆಸಿದ ಕಾರಣ ಅಂದು 20000ಕ್ಕೂ ಅಧಿಕ ಇದ್ದ ಪ್ರಕರಣ ಪ್ರಸಕ್ತ ತೀರಾ ಕಡಿಮೆಯಾಗಿದೆ. ಆದರೆ ಆ ಸಮಿತಿ ಸ್ಥಗಿತಗೊಂಡಿದೆ. ಸ್ಮಾರ್ಟ್ ಸಿಟಿಯಿಂದ 60 ಕೋಟಿ ರೂ. ಖರ್ಚು ಮಾಡಿ ಕಮಾಂಡ್ ಕಂಟ್ರೋಲ್ ರೂಂ ತೆರೆಯಲಾಗಿದೆ. ಅದನ್ನು ಡೆಂಗಿ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡೆಂಗಿ ಪ್ರಕರಣದ ಬಗ್ಗೆ ಕಳೆದ ಸುಮಾರು ಮೂರು ತಿಂಗಳಿನಿಂದೀಚೆಗೆ ಮನಪಾ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಹಿಂದಿದ್ದ ಡಾ. ಕೆ.ಆರ್. ಶೆಟ್ಟಿ, ಡಾ. ಕಕ್ಕಿಲ್ಲಾಯ ಹಾಗೂ ಡಾ. ಶಾಂತರಾಮ ಬಾಳಿಗ ನೇತೃತ್ವದ ಸಮಿತಿಯಂತೆ ಸಮಿತಿ ರಚನೆ ಮಾಡುವಂತೆ ಆಗ್ರಹಿಸಿದ್ದೇನೆ. ಆದರೆ ಈವರೆಗೆ ಆ ಕಾರ್ಯ ಆಗಿಲ್ಲ. ಈಗಾಲಾದರೂ ಈ ಬಗ್ಗೆ ಗಂಭೀರವಾಗಿ ಗಮನ ಹರಿಬೇಕು ಎಂದು ಹಿರಿಯ ಸದಸ್ಯ ಶಶಿಧರ ಹೆಗ್ಗೆ ಹೇಳಿದರು.

ಸರ್ಕ್ಯೂಟ್ ಹೌಸ್‌ನಲ್ಲೇ ಸೊಳ್ಳೆ ಉತ್ಪತ್ತಿ ಕೇಂದ್ರ!

ನಗರ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ವಲಸೆ ಕಾರ್ಮಿಕರಿರುವ ಪ್ರದೇಶಗಳಲ್ಲಿ ಡೆಂಗಿ ವ್ಯಾಪಕವಾಗಿದ್ದು, ಬಡ ಕಾರ್ಮಿಕರಿಗೆ ಡೆಂಗಿ ತಪಾಸಣೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸಬೇಕು ಎಂದು ಸದಸ್ಯ ಅನಿಲ್ ಕುಮಾರ್ ಆಗ್ರಹಿಸಿದರೆ, ಈಗಾಗಲೇ ಮನಪಾದಿಂದ ಮುಂಜಾಗೃತಾ ಕ್ರಮ ವಹಿಸಬೇಕಾಗಿತ್ತು. ಆದರೆ ಮನಪಾ ಆರೋಗ್ಯ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ವಿಐಪಿಗಳು ತಂಗುವ ನಗರದ ಸರ್ಕ್ಯೂಟ್ ಹೌಸ್ ಕೂಡಾ ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ ಎಂದು ನವೀನ್ ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದರು.

ಮನಪಾದಲ್ಲಿ ನೀರಿನ ಮೀಟರ್ ರೀಡಿಂಗ್ ಮಾಡುವ ಎಂಪಿಡಬ್ಲ್ಯು ಕಾರ್ಯಕರ್ತರೇ ಡೆಂಗಿ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಪರಿಸ್ಥಿತಿ ಇದ್ದು, ಮಲೇರಿಯಾಕ್ಕೆ ಮೀಸಲಾಗಿದ್ದ ಪ್ರತ್ಯೇಕ ಸಮಿತಿಯಂತೆ ಡೆಂಗಿಗೂ ಸಮಿತಿ ರಚನೆ ಅಗತ್ಯ ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಹೇಳಿದರು.

ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿ, ಮನಪಾದಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ ಆ್ಯಪ್ ಅಭಿವೃದ್ಧಿಪಡಿಸುವ ಜತೆಗೆ ಎಲ್ಲಾ ಸಾರ್ವಜನಿಕರಿಗೆ ಲಭ್ಯವಾಗುವ ರೀತಿಯಲ್ಲಿ ಕಂಟ್ರೋಲ್ ರೂಂ ಕಾರ್ಯಾಚರಿಸುವಂತಾಗಬೇಕು ಎಂದರು.

ಕಳೆದ ಐದು ವರ್ಷಗಳಲ್ಲಿ ಮಲೇರಿಯಾ ನಿಯಂತ್ರಣವಾಗಿದ್ದು, 2700ಕ್ಕೂ ಅಧಿಕ ಪ್ರಕರಣಗಳಿಂದ ಕಳೆದ ವರ್ಷ 82 ಹಾಗೂ ಈ ವರ್ಷ ಈವರೆಗೆ 43 ಪ್ರಕರಣಗಳಿಗೆ ಇಳಿಕೆಯಾಗಿದೆ. ಮಲೇರಿಯಾ ಹಾಗೂ ಡೆಂಗಿ ನಿಯಂತ್ರಣ ವಿಭಿನ್ನ ಪ್ರಕ್ರಿಯೆಯಾಗಿದೆ. ಮಲೇರಿಯಾದಲ್ಲಿ ಜ್ವರದ ನಿಯಂತ್ರಣ ಅಗತ್ಯವಾದರೆ, ಡೆಂಗಿಯಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಯುವುದೇ ಪ್ರಮುಖ ಅಂಶ ಎಂದು ಡಾ. ನವೀನ್ ಚಂದ್ರ ಕುಲಾಲ್ ಅಭಿಪ್ರಾಯಿಸಿದರು.

ಈಗಾಗಲೇ ನಗರದಲ್ಲಿ 113 ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ವಾಸ್ತವದಲ್ಲಿ ಇದಕ್ಕಿಂತ ಸುಮಾರು 20ರಿಂದ ಶೇ. 30ರಷ್ಟು ಹೆಚ್ಚು ಪ್ರಮಾಣದಲ್ಲಿ ಡೆಂಗಿ ಇರಬಹುದು. ಕೇಂದ್ರದ ಆರೋಗ್ಯ ಇಲಾಖೆ ಹಾಗೂ ಡಬ್ಲು ಎಚ್‌ಒ ನಿರ್ದೇಶನದ ಪ್ರಕಾರ ವಾರ್ಡೊಂದರಲ್ಲಿ ಐದು ಜನರಿಗೆ ಡೆಂಗಿ ಬಂದರೆ ಇಡೀ ವಾಡನ್ನು ಡೆಂಗಿ ಪೀಡಿತ ಎಂದು ನಿರ್ಧರಿಸಲಾಗುತ್ತದೆ. ರಾಜ್ಯ ಸರಕಾರ ಈಗಾಗಲೇ ಡೆಂಗಿ ನಿಯಂತ್ರಣಕ್ಕೆ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣೆಯ ವಿಧಾನ) ರೂಪಿಸಿದ್ದು, ಅದರಂತೆ ರ್ಯಾಪಿಡ್, ಶಂಕಿತ ಹಾಗೂ ದೃಢ ಪ್ರಕರಣಗಳನ್ನು ಪಟ್ಟಿ ಮಾಡಲಾಗುತ್ತದೆ. ಪ್ರತಿನಿತ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ ಜಿಲ್ಲಾ ಮಟ್ಟದ ಮೂಲಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಜಿಲ್ಲೆಯಲ್ಲಿ 2019ರಲ್ಲಿ ದೊಡ್ಡ ಮಟ್ಟದಲ್ಲಿ ಡೆಂಗಿ ಕಾಡಿದ್ದು, ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳುವುದೇ ಪ್ರಮುಖ ನಿಯಂತ್ರಣ ಕ್ರಮ. ಸದ್ಯ ಜಿಲ್ಲೆಯಲ್ಲಿ ಪ್ರತಿ ಶುಕ್ರವಾರ ಡ್ರೈ ಡೇ ಆಚರಿಸಲಾಗುತ್ತದೆ ಎಂದು ಎಂದು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಯಾಗಿ ಡಾ. ನವೀನ್ ಚಂದ್ರ ಕುಲಾಲ್ ಹೇಳಿದರು.

ಸಭೆಯಲ್ಲಿ ಉಪ ಮೇಯರ್ ಸುನೀತಾ, ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಆಯುಕ್ತ ಆನಂದ್ ಉಪಸ್ಥಿತರಿದ್ದರು.

ಮನಪಾದ ಡೆಂಗಿ ಕಾರ್ಯಾಚರಣೆ ಬಗ್ಗೆ ಸಂಸದ ಬೃಜೇಶ್ ಅಸಮಾಧಾನ

ಸಭೆಯಲ್ಲಿ ಭಾಗವಹಿಸಿದ್ದ ನೂತನ ಸಂಸದ ಕ್ಯಾ. ಬ್ರಜೇಶ್ ಚೌಟ ಪ್ರತಿಕ್ರಿಯಿಸಿ, ಡೆಂಗಿ ನಿಯಂತ್ರಣಕ್ಕೆ ಸಂಬಂಧಿಸಿ ಮನಪಾವೇ ಗೊಂದಲದಲ್ಲಿ ಇರುವಂತೆ ಭಾಸವಾಗುತ್ತಿದೆ. ಡೆಂಗಿಯ ಮಾಹಿತಿಗೆ ಸೂಕ್ತ ಕೇಂದ್ರವೇ ಇದ್ದ ಹಾಗೆ ಕಾಣಿಸುತ್ತಿಲ್ಲ. ಹಾಗಾಗಿ ಸೂಕ್ತ ಮಾಹಿತಿಗಳು ಲಭ್ಯವಾಗುತ್ತಿರುವ ಬಗ್ಗೆಯೂ ಸಂಶಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲದೆ, ಡೆಂಗಿ ನಿಯಂತ್ರಣಕ್ಕೆ ಸಂಬಂಧಿಸಿ ಸಂಘಟಿತ ನಿರ್ದಿಷ್ಟ ಯೋಜನೆಯ ಅಗತ್ಯವಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News