ಸಂತ ಸೆಬೆಸ್ಟಿಯನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿರಿಲ್ ವಿ ವೇಗಸ್ ಅವರಿಗೆ ಬೀಳ್ಕೊಡುಗೆ

ಕೊಣಾಜೆ: ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ದಾರಿ ತೋರಿಸುವವನೇ ನಿಜವಾದ ಶಿಕ್ಷಕ. ಜಗತ್ತಿನಲ್ಲಿ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಕೂಡ ಶಿಕ್ಷಕರಿಂದಲೇ ಆಗಿದೆ ಹಾಗಾಗಿ ಶಿಕ್ಷಕ ವೃತ್ತಿ ಎನ್ನುವುದು ಪವಿತ್ರವಾದದ್ದು ಮತ್ತು ಶ್ರೇಷ್ಠವಾದದ್ದು ಎಂದು ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಅಧಿಕಾರಿಗಳಾದ ಎಚ್ ಆರ್ ಈಶ್ವರ್ ಅಭಿಪ್ರಾಯ ಪಟ್ಟರು
ಇವರು ಅನುದಾನಿತ ಶಾಲಾ-ಕಾಲೇಜು ನೌಕರ ಸಂಘ ಮಂಗಳೂರು ದಕ್ಷಿಣ ವಲಯ ವತಿಯಿಂದ ಸಂತ ಸೆಬೆಸ್ಟಿಯನ್ ಪ್ರೌಢಶಾಲೆ ಪೆರ್ಮನ್ನೂರು ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತರಾದ ಸಿರಿಲ್ ವೇಗಸ್ ಅವರಿಗೆ ನಡೆದ ವಿದಾಯ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಅಭಿನಂದನ ಭಾಷಣ ಗೈದು ಸಿರಿಲ್ ವೇಗಸ್ ಅವರು ಒಬ್ಬ ಅಸಾಧಾರಣ ಶಿಕ್ಷಕರು ಮತ್ತು ಮಾರ್ಗದರ್ಶಕರಾಗಿದ್ದರು. ತಮ್ಮ ಜೀವನದಲ್ಲಿ ನೇರ ನಡೆ-ನುಡಿ ಆಚಾರವನ್ನು ವ್ಯಕ್ತಿಗತ ಮಾಡಿಕೊಂಡ ಇವರು ಸುಮಾರು 35 ವರ್ಷಗಳ ಕಾಲ ಶಿಕ್ಷಕರಾಗಿ ಮುಖ್ಯ ಶಿಕ್ಷಕರಾಗಿ ಕಠಿಣ ಪರಿಶ್ರಮದೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಧಾರಿತ ಶಿಕ್ಷಣವನ್ನು ನೀಡಿ ಎಲ್ಲರಿಗೂ ಮಾದರಿಯಾಗಿದ್ದರು ಎಂದರು.
ವೇದಿಕೆಯಲ್ಲಿ ಹೋಲಿ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಫಿಲೋಮಿನಾ ಸಿಕ್ವೆರ , ಸಂಘದ ಉಪಾಧ್ಯಕ್ಷರು ಗುರುಮೂರ್ತಿ , ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಹಮ್ಮದ್ ರಫೀಕ್ ತುಂಬೆ, ಪ್ರಭಾರ ಮುಖ್ಯ ಶಿಕ್ಷಕಿ ಅನ್ಸಿಟ ಡಿಸೋಜ, ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕರುಗಳಾದ ಗಣೇಶ್, ಶ್ರೀನಿವಾಸ ಶೆಣೈ , ಅನಿಲ್ ಡಿಸೋಜ, ವೆಂಕಟರಮಣ ಭಟ್, ಲಲಿತ , ಸೌಮ್ಯ , ಆಸ್ಟಿನ್ ಮೊಂತೆರೋ , ಭವ್ಯ ಫ್ರಾನ್ಸಿಸ್ ಕ್ರಾಸ್ತ , ಬಬಿತ ಮೋಹನ್ ಹರೇಕಳ ಮುಂತಾದವರು ಉಪಸ್ಥಿತರಿದ್ದರು. ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಸುನಿತ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಫಾಸಿಲ್ ವಂದಿಸಿದರು.