ಸಿನೆಮಾ ನಿರ್ಮಾಣ ಒಂದು ಸಾಮೂಹಿಕ ಪ್ರಕ್ರಿಯೆಯಾಗಬೇಕು: ಪ್ರಕಾಶ್ ರಾಜ್

Update: 2024-03-23 14:15 GMT

ಮಂಗಳೂರು: ಸಿನೆಮಾ ನಿರ್ಮಾಣ ಒಂದು ಸಾಮೂಹಿಕ ಪ್ರಕ್ರಿಯೆಯಾಗಬೇಕು ಅದರ ಮೂಲಕ ಬದುಕನ್ನು ನೋಡುವುದು ಮುಖ್ಯವಾಗುತ್ತದೆ. ನಿರ್ದೇಶಕ ಪ್ರೇಕ್ಷಕರ ನಡುವೆ ಸೇತುವೆಯಾಗಬೇಕು ಎಂದು ಖ್ಯಾತ ಚಲನಚಿತ್ರ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಅವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರ ಅಸ್ತಿತ್ವ (ರಿ)ಇದರ ಸಹಯೋಗದೊಂದಿಗೆ ನಡೆಯುತ್ತಿರುವ ನೇಹದ ನೇಯ್ಗೆ ನಿರ್ದಿಗಂತ ರಂಗೋತ್ಸವದಲ್ಲಿ ಶನಿವಾರ "ಸಿನೆಮಾ ನನ್ನ ಒಲವು ನಿಲುವು" ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸಿನೆಮಾದಲ್ಲಿ ಒಬ್ಬೊಬ್ಬರು ಒಂದೊಂದು ಭಾಷೆಯಲ್ಲಿ ಮಾತನಾಡಬಹುದು. ಆದರೆ ಅಲ್ಲಿ ಅವರು ಬದುಕನ್ನು ನೋಡುವ ರೀತಿ ಮುಖ್ಯವಾಗುತ್ತದೆ. ಸಿನಿಮಾ ನಿರ್ಮಾಣ ಕೇವಲ ಓರ್ವ ನಿರ್ದೇಶಕನಿಂದ ರೂಪುಗೊ ಳ್ಳುವಂತಿರಬಾರದು‌. ಸಿನೆಮಾ ಮಾಡುವವರು ದ್ವೀಪದಂತೆ ಇರಬಾರದು. ಹಲವಾರು ಜನರ ಅಭಿಪ್ರಾಯಗಳು ಒಂದು ಕಡೆ ಸೇರಿ ಚರ್ಚಿಸಿ ಆಯಾ ಕಾಲಘಟ್ಟದಲ್ಲಿ ಬದುಕನ್ನು ಯಾವ ರೀತಿಯಿಂದ ನೋಡುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ರಚಿಸುವ ಸಿನಿಮಾ ಕೃತಿಯೂ ಮುಖ್ಯವಾಗುತ್ತದೆ. ಮಲಯಾಳಂ, ತಮಿಳು ಸಿನೆಮಾದಲ್ಲಿ ಅಂತಹ ಉದಾಹರಣೆಗಳಿವೆ. ಕನ್ನಡದಲ್ಲೂ ಇತ್ತೀಚಿನ ಯುವ ನಿರ್ದೇಶಕರ ಮೂಲಕ ಆ ರೀತಿಯ ಪ್ರಯತ್ನ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಮತ್ತು ನಮ್ಮ ಆಶಯವಾಗಿದೆ ಎಂದು ಪ್ರಕಾಶ್ ರಾಜ್ ಅಭಿಪ್ರಾಯ ಪಟ್ಟರು.ಈ ಸಂದರ್ಭದಲ್ಲಿ ಯುವ ನಿರ್ದೇಶಕರು ತಮ್ಮ ಒಲವು ನಿಲುವುಗಳ ಬಗ್ಗೆ ತಿಳಿಸಿದರು.

"ಸಿನೆಮಾ ನಮ್ಮ ಪಠ್ಯದಲ್ಲಿ ಎಳವೆಯಲ್ಲಿಯೇ ಭಾಗವಾಗಬೇಕು‌. ಕೇರಳದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಅದಕ್ಕೆ ಅವಕಾಶವಿದೆ. ಕರ್ನಾಟಕದಲ್ಲಿ ಆ ಸಂಸ್ಕೃತಿ ಆರಂಭವಾಗಬೇಕು".

- ನಿರ್ದೇಶಕ ಅಭಯ ಸಿಂಹ

"ಒಲವು ಬೇರೆ ನಿಲುವು ಬೇರೆ .ಆಯಾ ಕಾಲಘಟ್ಟದಲ್ಲಿ ನಮ್ಮ ನಿಲುವುಗಳನ್ನು ಪ್ರೇಕ್ಷಕರಿಗೆ ತಲುಪಿಸುವುದೇ ನಮ್ಮ ಮುಂದಿರುವ ದೊಡ್ಡ ಸವಾಲು. ಕಿರುಗೂರಿನ ಗಯ್ಯಾಳಿಗಳು ನನ್ನ ಊರಿನ ಕಥೆಯನ್ನೆ ಹೋಲುತ್ತವೆ "

-ನಿರ್ದೇಶಕಿ ಸುಮನಾ ಕಿತ್ತೂರು.

"ಸ್ವತಂತ್ರ ಸಿನಿಮಾ ನಿರ್ದೇಶಕನಾಗುವ ಕನಸಿತ್ತು. ಅದನ್ನು ಪೂರೈಸಿದ ಬಳಿಕ ಆ ಸವಾಲುಗಳನ್ನು ಎದುರಿಸುವ ಧೈರ್ಯ ಬಂದಿದೆ. ಕೇವಲ ಹಣ ಇದ್ದರೆ ಮಾತ್ರ ಸಿನೆಮಾ ಮಾಡಲು ಸಾಧ್ಯ ಎನ್ನುವುದು ಸರಿಯಲ್ಲ. ಎನ್ನುವುದನ್ನು ನಾನು ಮನಗಂಡಿದ್ದೇನೆ"

- ನಿರ್ದೇಶಕ ಈರೇ ಗೌಡ.

"ತೇಜಸ್ವಿಯವರ ಕಥೆಗಳಿಂದ ನಾನು ಪ್ರೇರಿತನಾಗಿ ಸಿನೆಮಾ ಮಾಡಲು ಬಂದೆ. ಅಲ್ಲಿನ ಕೆಲವು ಸಂಗತಿಗಳನ್ನು ಇನ್ನಷ್ಟು ಜನರಿಗೆ ತಲುಪಿಸುವುದು ನನ್ನ ಉದ್ದೇಶವಾಗಿತ್ತು"

-ನಿರ್ದೇಶಕ ಶಶಾಂಕ್ ಸೌಗಲ್

* "ಕೊರೋನ ಸಂದರ್ಭದಲ್ಲಿ ಆಗಿರುವ ಲಾಕ್ ಡೌನ್ ನಿಂದ ಸಿಂದನೂರು ತಾಲೂಕಿನ ಕಾರ್ಮಿಕ ಮಹಿಳೆ ಗಂಗಮ್ಮ ಸಾವಿರಾರು ಮೈಲು ನಡೆದಾಡಿ ಅಸುನೀಗಿದ ಘಟನೆ ನನ್ನನ್ನು ಕಾಡಿತು. ಅದೇ ನನ್ನ ಪೋಟೊ ಸಿನೆಮಾದ ವಿಷಯ"

- ನಿರ್ದೇಶಕ ಉತ್ಸವ್ 

.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News