ಗಾಂಧೀಜಿಗೆ ಐದು ಬಾರಿ ನೊಬೆಲ್ ಪ್ರಶಸ್ತಿಗೆ ಶಿಫಾರಸ್ಸು ಆಗಿತ್ತು: ಪ್ರೊ. ರವಿಶಂಕರ ರಾವ್

Update: 2023-10-02 12:31 GMT

ಮಂಗಳೂರು, ಅ.2: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ಸಾಹಿತ್ಯ, ಪದಗಳ ಬಳಕೆ , ಭಾಷಾ ಪ್ರಯೋಗದಲ್ಲಿ ವಿಶೇಷ ಶಕ್ತಿಯನ್ನು ಹೊಂದಿದ್ದರು. ನಿರಂತರವಾಗಿ ಸಾಹಿತ್ಯ ಕೃಷಿ ಮಾಡಿದ್ದ ಅವರಿಗೆ ಐದು ಬಾರಿ ನೊಬೆಲ್ ಪ್ರಶಸ್ತಿಗಾಗಿ ಶಿಫಾರಸ್ಸು ಆಗಿತ್ತು. ಆದರೆ ಒಮ್ಮೆಯೊ ನೊಬೆಲ್ ಪ್ರಶಸ್ತಿ ದೊರೆಯಲಿಲ್ಲ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರವಿಶಂಕರ ರಾವ್ ಅಭಿಪ್ರಾಯಪಟ್ಟರು.

ನಗರದ ಟಾಗೋರ್ ಪಾರ್ಕ್‌ನಲ್ಲಿ ಸೋಮವಾರ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಮಹಾತ್ಮ ಗಾಂಧಿ ಜಯಂತಿ ಆಚರಣೆಯ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.

ಮಹಾತ್ಮ ಗಾಂಧಿ ಅವರಿಗೆ ಶಾಂತಿಗಾಗಿ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು. ಮಹಾತ್ಮ ಗಾಂಧಿಗೆ 1937, 1938, 1939,1947, 1948ರಲ್ಲಿ ನೊಬೆಲ್ ಪ್ರಶಸ್ತಿಗೆ ಶಿಫಾರಸ್ಸು ಆಗಿತ್ತು. ಬರವಣಿಗೆ ಯಲ್ಲಿ ಅವರಿಗೆ ನಂಬಿಕೆ ಇತ್ತು. ಪ್ರಶಸ್ತಿಗಾಗಿ ಬರೆದವರಲ್ಲ. ಪ್ರಶಸ್ತಿಯನ್ನು ಅರಸಿಕೊಂಡು ಹೋದವರಲ್ಲ ಎಂದು ಹೇಳಿದರು.

ಮಹಾತ್ಮ ಗಾಂಧಿ ಅವರ ವಿಶಿಷ್ಟ ಗುಣವೆಂದರೆ ಅವರು ನಿರಂತರವಾಗಿ ಕಲಿಯುತ್ತಿದ್ದರು. ಎಲ್ಲ ಸಂಸ್ಕೃತಿಯು ಅವರಿಗೆ ಮುಖ್ಯವಾಗಿತ್ತು. ಭಾರತೀಯ ಸಂಸ್ಕೃತಿ ಜಗತ್ತಿನಲ್ಲೇ ಶೇಷ್ಠವಾದುದೆಂದು ನಂಬಿದ್ದರು.

ಶ್ರೇಷ್ಠ ಭಾಷಾ ಪ್ರಯೋಗದ ಅಪೂರ್ವ ಶಕ್ತಿಯನ್ನು ಹೊಂದಿದ್ದ ಗಾಂಧೀಜಿ ಹಾಸ್ಯ ಚಟಾಕಿ ಹಾರಿಸುವುದರಲ್ಲಿ ಮುಂದಿದ್ದರು. ದುಂಡುಮೇಜಿನ ಪರಿಷತ್‌ನ ವೇಳೆ ಭೇಟಿಯಾಗಲು ಬಂದಿದ್ದ ಜಾಗತಿಕ ಸಿನಿಮಾದ ಜನಪ್ರಿಯ ನಟ ಚಾರ್ಲಿ ಚಾಪ್ಲಿನ್ ಬಿದ್ದು ಬಿದ್ದು ನಗುವ ರೀತಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದರು ಎಂದು ಗಾಂಧೀಜಿ ಹಾಸ್ಯಪ್ರಜ್ಞೆಯ ಬಗ್ಗೆ ಗುಣಗಾಣ ಮಾಡಿದರು.

ವೈದ್ಯರ ಸಲಹೆ ಮೇರೆಗೆ ಗಾಂಧೀಜಿ ಹಾಲು ಕುಡಿಯುತ್ತಿದ್ದರು. ಆದರೆ ದನದ ಹಾಲಲ್ಲ. ಆಡಿನ ಹಾಲು ಕುಡಿಯುತ್ತಿದ್ದರು. ಹೀಗಾಗಿ ಹೋದ ಕಡೆಗಳಲ್ಲಿ ಆಡುಗಳನ್ನು ಕೊಂಡೊಯ್ಯುತ್ತಿದ್ದರು. ಇಂಗ್ಲೆಂಡ್‌ಗೆ ಹೋದಾಗಲೂ ಕೂಡಾ ಎರಡು ಆಡು ಗಳನ್ನು ಕೊಂಡೊಯ್ದಿದ್ದರು. ಗಾಂಧೀಜಿಯ ಈ ವ್ಯವಸ್ಥೆಯನ್ನು ನೋಡಿ ‘ಗಾಂಧೀಜಿ ಕಾಂಗ್ರೆಸ್‌ಗೆ ದುಬಾರಿಯಾಗುತ್ತಿದ್ದಾರೆ ’ಎಂದು ಸರೋಜಿನಿ ನಾಯ್ಡು ಹಾಸ್ಯ ಚಟಾಕಿ ಹಾರಿಸಿದ್ದರು.

ಯೋಗ ಸಾಧನೆ ಮಾಡಿದ್ದ ಗಾಂಧೀಜಿ ಕರ್ಮಯೋಗಿಯಾಗಿದ್ದರು. ಅವರಿಗೆ ಕರ್ಮಯೋಗದಲ್ಲಿ ಅಪಾರ ನಂಬಿಕೆ ಇತ್ತು. ರಾಮನಾಮವನ್ನು ಸದಾ ಜಪಿಸುತ್ತಿದ್ದ ಗಾಂಧೀಜಿ ರಾಮಮಾರ್ಗದಲ್ಲಿ ನಡೆದಾಡಿವರು. ಎಲ್ಲರ ಕಣ್ಣೀರು ಒರೆಸುವ ಆದರ್ಶ ಆಡಳಿತವಿರುವ ರಾಮ ರಾಜ್ಯದ ಕನಸು ಕಂಡಿದ್ದ ಗಾಂಧೀಜಿ ಅದಕ್ಕಾಗಿ ಒತ್ತು ನೀಡಿದ್ದರು ಎಂದು ನುಡಿದರು.

ಗಾಂಧಿ ಪರಿಶುದ್ಧತೆ, ಸ್ವಚ್ಛತೆಗೆ ಒತ್ತು ನೀಡಿದ್ದರು. ಪರಿಶುದ್ಥತೆ ಹೆಚ್ಚು ಗಮನ ನೀಡಿದ್ದ ಗಾಂಧಿ ಅವರನ್ನು ಇವತ್ತಿನ ದಿನ ಗಳಲ್ಲಿ ನಾವು ಮರೆತಿದ್ದೇವೊ ಎಂಬ ಭಾವನೆ ಬರುತ್ತಿದೆ. ಗಾಂಧಿ ಜಯಂತಿ ದಿನ ಅವರ ಬದುಕನ್ನು ತೆರೆದಿಟ್ಟಲ್ಲಿ ಎಲ್ಲರಿಗೂ ಗಾಂಧೀಜಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ರವಿಶಂಕರ ರಾವ್ ಅಭಿಪ್ರಾಯಪಟ್ಟರು.

ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಉಸಿರಿಗಾಗಿ ಹಸಿರು ಬೆಳೆದು ಭೂಮಿ ಬಾನಿಗೆ ನಂಟು ಬೆಸೆದ ಪರಿಸರ ಪ್ರೇಮಿ ಮಾಧವ ಉಳ್ಳಾಲರಿಗೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಪ್ರದಾನ ಮಾಡಲಾಯಿತು.

6,000 ಸಾವಿರ ಗಿಡ ನೆಡುವ ಯೋಜನೆ : ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಮೇಯರ್ ಆಗಿ ರಾಷ್ಟ್ರದ ಏಕತೆ ಸಮಗ್ರತೆ, ಪ್ರಜಾಪ್ರಭುತ್ವಕ್ಕೆ ಬದ್ಧನಾಗಿ , ಸರ್ವಧರ್ಮ ಸಮಭಾವ ಸಿದ್ಧಾಂತದಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.

ಪರಿಸರ ಪ್ರೇಮಿ ಮಾಧವ ಉಳ್ಳಾಲರ ಪರಿಸರ ಕಾಳಜಿ ಶ್ಲಾಘಿನೀಯ. ಅವರ ನೇತೃತ್ವದಲ್ಲಿ ಮಂಗಳೂರು ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ವಿಶ್ವ ಪರಿಸರ ದಿನಾಚರಣೆಯಂದು ಪ್ರತಿ ವಾರ್ಡ್‌ನಲ್ಲಿ ತಲಾ 100 ಗಿಡಗಳಂತೆ 6,000 ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.

ಟಾಗೋರ್ ಪಾರ್ಕ್‌ನ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಉಪಾಧ್ಯಕ್ಷರಾದ ಬಿ. ಪ್ರಭಾಕರ ಶ್ರೀಯಾನ್ ಹಾಗೂ ಹಾಜಿ ಇಬ್ರಾಹೀಂ ಕೋಡಿಜಾಲ್, ಸಹ ಕೋಶಾಧಿಕಾರಿ ಪ್ರೇಮ್ ಚಂದ್ ಕಾರ್ಯದರ್ಶಿ ಡಾ.ಇಸ್ಲಾಯಿಲ್ ಎನ್, ಜತೆ ಕಾರ್ಯದರ್ಶಿಗಳಾದ ಹೆರಾಲ್ಡ್ ಡಿಸೋಜ, ಕಲ್ಲೂರು ನಾಗೇಶ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News