ಮಂದಿರ ಉದ್ಘಾಟನೆ: ಜ.22ರಂದು ಶಾಲಾ-ಕಾಲೆಜುಗಳಿಗೆ ರಜೆ ಘೋಷಿಸುವಂತೆ ಶಾಸಕ ಭರತ್ ಶೆಟ್ಟಿ ಒತ್ತಾಯ
ಮಂಗಳೂರು: ತಾನು ರಾಮ ಭಕ್ತನೆಂದು ಹೇಳುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.22ರಂದು ಶಾಲಾ ಕಾಲೆಜುಗಳಿಗೆ ರಜೆ ನೀಡುವ ಮೂಲಕ ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ಸಮೇತ ಸಂಭ್ರಮ, ಪೂಜೆ ಆಚರಿಸಲು ಅವಕಾಶ ನೀಡಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಒತ್ತಾಯಿಸಿದ್ದಾರೆ.
ರಾಮನ ಆದರ್ಶ ಬೋಧಿಸುವ ಶಿಕ್ಷಣ ಇಲಾಖೆಯು ರಾಮ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಠೆ ಸಂದರ್ಭ ಮಕ್ಕಳು ಕುಟುಂಬ ಸಮೇತ ಪೂಜೆ, ಸಂಭ್ರಮವನ್ನು ಆಚರಿಸಲು ಸೋಮವಾರ ರಾಜ್ಯ ಶಿಕ್ಷಣ ಇಲಾಖೆ ರಜೆ ನೀಡಿಲ್ಲ. ಈ ಮೂಲಕ ಮೂಲಕ ಶಿಕ್ಷಣ ಇಲಾಖೆ ರಾಮನ ಆದರ್ಶ ಬೋಧಿಸುವ ನೈತಿಕತೆ ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.
ಇಡೀ ದೇಶದಲ್ಲಿ ಹಬ್ಬದ ಸಂಭ್ರಮವಿದೆ. ಮನೆ ಮನೆಯಲ್ಲೂ ದೀಪಾವಳಿ ಅಚರಣೆಗೆ ತಯಾರಿ ನಡೆದಿದೆ. ಶಿಕ್ಷಣ ಇಲಾಖೆ ಮಾತ್ರ ಈ ಸಂಭ್ರಮದಲ್ಲಿ ಮಕ್ಕಳು ಭಾಗವಹಿಸದಂತೆ ರಜೆ ನೀಡದೆ ತಡೆ ಒಡ್ಡಿದೆ ಎಂದು ಆಕ್ಷೇಪಿಸಿದರು.
ಕೆಲವು ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ ಉದ್ದೇಶ ಪೂರ್ವಕವಾಗಿ ಪರೀಕ್ಷೆ ನಡೆಸಲು ಮುಂದಾಗಿರುವುದು ಗಮನಕ್ಕೆ ಬಂದಿದೆ. ಸರಕಾರ ತಕ್ಷಣ ರಜೆ ನೀಡಲು ಶಿಕ್ಷಣ ಇಲಾಖೆಗೆ ಆದೇಶಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಒತ್ತಾಯಿಸಿದ್ದಾರೆ.
ಬಹುಸಂಖ್ಯಾತ ರ ಅದರ್ಶ ಪುರುಷ ರಾಮನ ಮಂದಿರವು 500 ವರ್ಷಗಳ ಸುಧೀರ್ಘ ಹೋರಾಟದ ಬಳಿಕ ಅಸ್ಥಿತ್ವಕ್ಕೆ ಬರುತ್ತಿದೆ. ನಮ್ಮ ಪೀಳಿಗೆಗೆ ಇದನ್ನು ವೀಕ್ಷಿಸಲು ಸಿಕ್ಕಿರುವುದು ಪುಣ್ಯವೆಂದೇ ಭಾವಿಸಿದ್ದೇವೆ. ಈ ಭಾಗ್ಯದಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡಿ ಶಿಕ್ಷಣ ಇಲಾಖೆ ಯಾವ ಸಾಧನೆ ಮಾಡಲು ಹೊರಟಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.