ಜು.22ರಿಂದ ಮಂಗಳೂರಿನಲ್ಲಿ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿ

Update: 2023-07-19 12:26 GMT

ಮಂಗಳೂರು, ಜು.19: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿ ಜುಲೈ 22ರಿಂದ ಆಗಸ್ಟ್ 15ರ ತನಕ ನಗರದ ನೆಹರೂ ಮೈದಾನದ ಪಕ್ಕದ ಫುಟ್ಬಾಲ್ ಗ್ರೌಂಡ್‌ನಲ್ಲಿ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ 25ನೇ ವರ್ಷದ ಫುಟ್ಬಾಲ್ ಪಂದ್ಯಾವಳಿ 25 ದಿನಗಳ ಕಾಲ ಬೆಳಗ್ಗೆ 9 ಗಂಟೆಯಿಂದ ಸಂಜೆಯ ತನಕ ನಡೆಯಲಿದೆ ಎಂದರು.

ಫುಟ್ಬಾಲ್ ಪಂದ್ಯಾವಳಿಯು 7 ವಿಭಾಗಗಳಲ್ಲಿ ನಡೆಯಲಿದ್ದು, ದ.ಕ. ಉಡುಪಿ,ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಯ ಸುಮಾರು 210ಕ್ಕೂ ಅಧಿಕ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ದೇಶದ 50ನೇ ಸ್ವಾತಂತ್ರ್ಯ ದಿನಾಚರಣೆಯ ಸಂಕೇತವಾಗಿ 25 ವರ್ಷಗಳ ಹಿಂದೆ ಕಾಲೇಜು ಮಟ್ಟದ ಮೊದಲ ಫುಟ್ಬಾಲ್ ಪಂದ್ಯಾವಳಿ ‘ಇಂಡಿಪೆಂಡೆನ್ಸ್ ಕಪ್’ ಸಂಘದ ಅಂದಿನ ಅಧ್ಯಕ್ಷ ಪಳ್ಳಿ ಜಯರಾಮ ಶೆಟ್ಟಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಮೊದಲ ಪಂದ್ಯಾವಳಿಯಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿಭಾಗದಲ್ಲಿ (ಪದವಿಪೂರ್ವ ಕಾಲೇಜು ಸೇರಿ) ಮಾತ್ರ ಪಂದ್ಯಾಟ ನಡೆದರೆ ಇಂದು ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ (ಬಾಲಕರ ಹಾಗೂ ಬಾಲಕಿಯರ) ಹಾಗೂ ಪದವಿ ಕಾಲೇಜು ( ವೃತ್ತಿಪರ ಕಾಲೇಜು ಸೇರಿ) ಸೇರಿದಂತೆ ಒಟ್ಟು 7 ವಿಭಾಗಗಳಲ್ಲಿ ಪಂದ್ಯಾಟ ನಡೆಯುತ್ತದೆ. ಅಂದಿನಿಂದ ಇಂದಿನವರೆಗೆ ( ಕೋವಿಡ್ ಕಾರಣದಿಂದ ಒಂದು ವರ್ಷ ಹೊರತುಪಡಿಸಿ) ನಿರಂತರವಾಗಿ ಪಂದ್ಯಾಟ ನಡೆಯುತ್ತಿದೆ.

ಪಂದ್ಯಾವಳಿಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಯಾನಂದ ಅಂಚನ್ ಉದ್ಘಾಟಿಸಲಿರುವರು . ಫುಟ್ಬಾಲ್ ಆಟದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಮತ್ತು ರಾಜ್ಯ ರಾಷ್ಟ್ರ ಮಟ್ಟದ ಫುಟ್ಬಾಲ್ ಆಟಗಾರರನ್ನು ರೂಪಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಈ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಕಳೆದ 25 ವರ್ಷಗಳಲ್ಲಿ ಹಲವಾರು ರಾಜ್ಯ ರಾಷ್ಟ್ರಮಟ್ಟದ ಆಟಗಾರರಾಗಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಅದರಲ್ಲಿಯೂ ಇಲ್ಲಿನ ಬಾಲಕಿಯರು ತಮ್ಮ ಪ್ರತಿಭೆ ಮೂಲಕ ರಾಜ್ಯ, ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದಾರೆ ಕೆಲವು ಆಟಗಾರರು, ಬೆಂಗಳೂರಿನಲ್ಲಿ ನಡೆಯುತ್ತಿರುವ ಲೀಗ್ ಪಂದ್ಯಾಟಗಳಲ್ಲಿ ವಿವಿಧ ಕ್ಲಬ್‌ಗಳ ಪರ ಆಡಿದ್ದಾರೆ ಎಂದು ಅಸ್ಲಂ ವಿವರಿಸಿದರು.

ಫುಟ್ಬಾಲ್ ಆಟದ ಜೊತೆಗೆ ನಾವು ಹಲವಾರು ವರ್ಷಗಳಿಂದ ವಿದ್ಯಾರ್ಥಿ ಸಮುದಾಯದಲ್ಲಿ ವ್ಯಾಪಕವಾಗಿ ಹರಡಿರುವ ಮಾದಕ ಪದಾರ್ಥಗಳ ಸೇವನೆಯ ಚಟವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಆ್ಯಂಟಿ ಡ್ರಗ್ಸ್ ಕ್ಯಾಂಪೇನ್ ಕೂಡ ನಡೆಸುತ್ತಿದ್ದೇವೆ. ಅಲ್ಲದೆ ರಕ್ತದಾನದ ಬಗ್ಗೆ ಕೂಡ ಅರಿವು ಮೂಡಿ ಸುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ವರ್ಷ 25ನೇ ವರ್ಷದ ಪಂದ್ಯಾವಳಿ ಆಗಿರುವ ಕಾರಣ ವಿಜೇತ ತಂಡಗಳಿಗೆ ಟ್ರೋಫಿ, ನಗದು ಬಹುಮಾನ ಅಲ್ಲದೆ ಉತ್ತಮ ಆಟಗಾರರಿಗೆ ಫಲಕ ಹಾಗೂ ನಗದು ಬಹುಮಾನ ಹಾಗೂ ಭಾಗವಹಿಸುವ ಎಲ್ಲಾ ಆಟಗಾರರಿಗೆ ಸರ್ಟಿಫಿಕೇಟ್ ಮತ್ತು ವಿಜೇತ ತಂಡದ ಎಲ್ಲಾ ಆಟಗಾರರಿಗೆ ಪದಕಗಳನ್ನು ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ಹೆಚ್ಚಿನ ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಲಾಗುವುದು, ವಿವಿಧ ವಯೋಮಾನದ ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ರಾಜ್ಯ ಫುಟ್ಬಾಲ್ ತಂಡದ ಆಯ್ಕೆ ಶಿಬಿರದಲ್ಲಿ ಭಾಗವಹಿಸಲು ಕಳುಹಿಸುವ ಯೋಜನೆ ಇದೆ ಎಂದರು.

ಆ.15 ರಂದು ಫೈನಲ್ ಪಂದ್ಯಾಟ ನಡೆಯಲಿದೆ, ಅಂದು ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಲಿದೆ. ಮಾಜಿ ಶಾಸಕ ಎಸ್. ಕೆ. ಅಮಿನ್ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿದ್ದು ಮಾಜಿ ಮೇಯರ್ ಅಬ್ದುಲ್ ಖಾದರ್, ಪಳ್ಳಿ ಜಯರಾಮ ಶೆಟ್ಟಿ ಇವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ದ್ದರು. ಅಬ್ದುಲ್ ಅಝೀಝ್, ಬೆಂಜಮಿನ್ ಡಿಸೋಜ, ರಾಮಚಂದ್ರ ಬೆಂಗ್ರೆ ,ಅಹಮ್ಮದ್ ಮಾಸ್ಟರ್ ಮುಂತಾದವರು ಸಂಘದ ವಿವಿಧ ಪದಾಧಿಕಾರಿ ಯಾಗಿ ಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.

ತಾನು ಜಿಲ್ಲಾ ಫುಟ್ಬಾಲ್ ಅಧ್ಯಕ್ಷರಾಗಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದಾಗಿ ಅಸ್ಲಂ ಹೇಳಿದರು. ದ.ಕ. ಜಿಲ್ಲಾ ಫುಟ್ಬಾಲ್ ಸಂಸ್ಥೆ ಕರ್ನಾಟಕ ರಾಜ್ಯ ಸಂಸ್ಥೆಯ ಸಹ ಸಂಸ್ಥೆಯಾಗಿದ್ದು, ಅಖಿಲ ಭಾರತ ಫುಟ್ಟಾಲ್ ಫೆಡರೇಶನ್‌ನ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಬಿ.ಥೋಮಸ್, ಕಾರ್ಯದರ್ಶಿ ಹುಸೈನ್ ಬೋಳಾರ್, ಖಜಾಂಚಿ ಫಿರೋಜ್ ಉಳ್ಳಾಲ್ ಮತ್ತು ಸದಸ್ಯ ಅಬ್ದುಲ್ ಲತೀಬ್ ಬೆಂಗ್ರೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News