ಇಂಡಿಯಾ ಒಕ್ಕೂಟವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ: ಅನಿಲ್ ರಾಜಿಮ್‌ವಾಲೆ

Update: 2024-09-29 13:38 GMT

ಮಂಗಳೂರು: ದೇಶದಲ್ಲಿ ಎಡಪಕ್ಷಗಳ ಮುತುವರ್ಜಿಯಿಂದ ರಚನೆಯಾಗಿರುವ ಇಂಡಿಯಾ ಒಕ್ಕೂಟ ದೇಶ ಹಿತಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದು, ಆನೇಕ ಬದಲಾವಣೆಗೆ ಕಾರಣವಾಗಿರುವ ಇಂಡಿಯಾ ಒಕ್ಕೂಟವನ್ನು ಮತ್ತಷ್ಟು ಬಲಪಡಿಸ ಬೇಕಾಗಿದೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯರಾದ ಅನಿಲ್ ರಾಜಿಮ್‌ವಾಲೆ ಹೇಳಿದ್ದಾರೆ.

ನಗರದ ಬಲ್ಮಠದ ಬಿಷಪ್ ಜತ್ತಣ್ಣ ಸಭಾಂಗಣದಲ್ಲಿ ರವಿವಾರ ನಡೆದ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮ ದಲ್ಲಿ ‘ಭಾರತ ಕಮ್ಯುನಿಸ್ಟ್ ಪಕ್ಷದ ವಿಭಜನೆ : ಕಾರಣಗಳು ಮತ್ತು ಪರಿಣಾಮಗಳು’ ಎಂಬ ವಿಷಯ ಬಗ್ಗೆ ಉಪನ್ಯಾಸ ನೀಡಿದರು.

ದೇಶ ರಾಜಕೀಯ, ಪ್ರಜಾಪ್ರಭುತ್ವವಾದಿ ಪ್ರಗತಿಯೊಂದಿಗೆ ಮುಂದುವರಿಯಬೇಕಾಗಿದೆ. ಇದಕ್ಕಾಗಿ ನಾವು ಶ್ರಮಿಸ ಬೇಕಾ ಗಿದೆ. ನಾವು ಇತಿಹಾಸವನ್ನು ಅರಿತುಕೊಂಡು ಅದರ ಅನುಭವದೊಂದಿಗೆ ಮುನ್ನಡೆಯಬೇಕಾಗಿದೆ ಎಂದರು.

1964ರಲ್ಲಿ ಕಮ್ಯುನಿಸ್ಟ್ ವಿಭಜನೆಯಾಗಿರುವುದು ಭಾರತದಲ್ಲಿ ಕಮ್ಯುನಿಸ್ಟ್ ಚಳುವಳಿಗೆ ಮಾರಕವಾಗಿ ಪರಿಣಮಿಸಿತು. ಅದೊಂದು ದುರಂತ. ಪ್ರಗತಿಪರ ಹಾಗೂ ಪ್ರಜಾಪ್ರಭುತ್ವವಾದಿ ಚಳುವಳಿಗಳೂ ಇದರಿಂದ ಹಿಂಜರಿತ ಅನುಭವಿಸಿದೆ. ಕಮ್ಯುನಿಸ್ಟ್ ಬೆಂಬಲಿಗರು ಮತ್ತು ಪಕ್ಷದ ಮೇಲೆ ಸಹಾನುಭೂತಿ ಇದ್ದವರು ಈ ಬೆಳವಣಿಗೆಯಿಂದ ಆಘಾತ ಅನುಭವಿಸಿ ದ್ದಾರೆ. ಬಲಪಂಥೀಯರ ಶಕ್ತಿ ವೃದ್ಧಿಗೆ ಈ ಬೆಳವಣಿಗೆ ಸಹಾಯಕವಾಯಿತು ಎಂದು ಅವರು ಹೇಳಿದರು.

*ಭಿನ್ನಾಭಿಪ್ರಾಯ ಪೂರ್ಣ ಬಗೆಹರಿದಿಲ್ಲ: ಇಂದಿನ ದಿನಗಳಲ್ಲಿ ಭಿನ್ನಾಭಿಪ್ರಾಯ ಪೂರ್ಣವಾಗಿ ಬಗೆಹರಿಯದಿದ್ದರೂ, ಭಾರತದ ಎಲ್ಲ ಕಮ್ಯುನಿಸ್ಟ್ ಪಕ್ಷಗಳು ಪರಸ್ಪರ ಸಹಕಾರದಿಂದ ಮುಂದುವರಿಯುತ್ತಿವೆ. ಜೊತೆಗೂಡಿ ಹೋರಾಟ ನಡೆಸುತ್ತಿವೆ. ಇದೊಂದೇ ತೃಪ್ತಿಕರ ಸಂಗತಿಯಾಗಿದೆ ಎಂದರು.

ಚೀನಾದ ಆಕ್ರಮಣದಿಂದ ಪೆಟ್ಟು: 1962ರಲ್ಲಿ ಚೀನಾವು ʼಹಿಂದಿ-ಚೀನೀ ಬಾಯಿ ಬಾಯಿʼ ಘೋಷಣೆಯನ್ನು ಬದಿಗೊತ್ತಿ ಭಾರತದ ಮೇಲೆ ಅಕ್ರಮಣ ನಡೆಸಿತು. ಇದರಿಂದ ರಾತ್ರೋರಾತ್ರಿ ಭಾರತದಲ್ಲಿ ಕಮ್ಯುನಿಸ್ಟ್ ವಿರೋಧಿ ಪ್ರಚಾರ ಹೆಚ್ಚಿತು, ಚೀನಾ ಆಕ್ರಮ ಸಮಯದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಬಹಳಷ್ಟು ಜನಾನುರಾಗಿಯಾಗಿ ಬೆಳೆದಿತ್ತು. ಸಮಾಜವಾದಿ ಸಮಾಜ ನಿರ್ಮಾಣದ ಹಂತವೆಂಬಂತೆ ಸಿಪಿಐ ಒಂದು ದೊಡ್ಡ ಸಾಮೂಹಿಕ ಹೋರಾಟಕ್ಕೆ ಅಣಿಯಾಗಿತ್ತು, ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದರು.

*ಕಾರ್ಮಿಕ ಸಂಘಟನೆ ವಿಭಜನೆ: 1963ರಲ್ಲಿ ಸ್ವತಂತ್ರ ಭಾರತದ ಪ್ರಪ್ರಥಮ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮವನ್ನು ಸಿಪಿಐ ಆಯೋಜಿಸಿದಾಗ ಲಕ್ಷಗಟ್ಟಲೆ ಜನರು ಅದರಲ್ಲಿ ಭಾಗಿಗಳಾಗಿದ್ದರು. ಕೋಟಿಗೂ ಮಿಕ್ಕಿ ಜನ ಹಕ್ಕೊತ್ತಾಯಕ್ಕೆ ಸಹಿ ಹಾಕಿದ್ದರು. ಆದರೆ ಪಕ್ಷದ ವಿಭಜನೆಯಿಂದಾಗಿ ಕಾರ್ಮಿಕ ಸಂಘಟನೆಗಳು ವಿಭಜನೆಗೊಂಡವು. ಕಿಸಾನ್ ಸಭಾ ನಿಶಕ್ತವಾ ಯಿತು. ಯುವ, ವಿದ್ಯಾರ್ಥಿ, ಮಹಿಳಾ, ರೈತ ಸಂಘಟನೆಗಳು ಗೊಂದಲಕ್ಕೀಡಾದವು ಈ ಎಲ್ಲಾ ಸಂಘಟನೆಗಳೂ ವಿಭಜನೆ ಗೊಂಡು ಕಮ್ಯುನಿಸ್ಟ್ ಚಳುವಳಿ ಬಹಳಷ್ಟು ಹಿನ್ನಡೆ ಸಾಧಿಸಿತು ಎಂದು ಅಭಿಪ್ರಾಯಪಟ್ಟರು.


1920ರಲ್ಲಿ ನಡೆದ ಅಂತರ್‌ ರಾಷ್ಟ್ರೀಯ ಕಮ್ಯುನಿಸ್ಟ್ ಅಧಿವೇಶನದಲ್ಲಿ ಎಮ್.ಎನ್.ರಾಯ್ ಅವರು ಭಾರತದ ಕಮ್ಯುನಿಸ್ಟ ರನ್ನು ಪ್ರತಿನಿಧಿಸಿದ್ದರು. ಅವರು ಭಾರತದಲ್ಲಿ ಗಾಂಧಿ, ನೆಹರೂ ಮುಂತಾದ ಮುಂದಾಳುಗಳನ್ನು ತೊಡೆದುಹಾಕಿ ಕಮ್ಯುನಿಸ್ಟರು ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಗಳನ್ನು ನಡೆಸಬೇಕು ಎಂದು ಪ್ರತಿಪಾದಿಸಿದ್ದರು. ಲೆನಿನ್‌ರವರು ಇದನ್ನು ಕಟುವಾಗಿ ಖಂಡಿಸಿ, ಭಾರತದ ಕಮ್ಯುನಿಸ್ಟರು ಪ್ರಜಾಪ್ರಭುತ್ವವಾದಿ ಭೂರ್ಶ್ವಾ ಸಂಘಟನೆಗಳ ಜೊತೆಗೂಡಿ ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕು ಹಾಗೂ ತಮ್ಮ ಸ್ವಂತಿಕೆ ಉಳಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದರು ಎಂದರು.

1951-52ರಲ್ಲಿ ನಡೆದ ಚುನಾವಣೆಗಳಲ್ಲಿ ಸಿಪಿಐ ಭಾಗವಹಿಸಿ ಮುಖ್ಯ ವಿರೋಧ ಪಕ್ಷವಾಗಿ ಮೂಡಿಬಂದಿತು, 1957ರಲ್ಲಿ ನಡೆದ ಕೇರಳ ವಿಧಾನ ಸಭೆ ಚುನಾವಣೆಯಲ್ಲಿ ಸಿಪಿಐ ಅಧಿಕಾರ ಪಡೆಯಿತು. ಈ ಎಲ್ಲಾ ಅನುಭವಗಳೊಂದಿಗೆ ಪಕ್ಷದ ಮನೋಭಾವದಲ್ಲೂ ಪರಿವರ್ತನೆಗಳಾದವು ಎಂದು ನುಡಿದರು.

1953ರಲ್ಲಿ ನಡೆದ ಅಮೃತಸರ ಅಧಿವೇಶನದಲ್ಲಿ ಸಿಪಿಐ ಸಂವಿಧಾನದ ಪೀಠಿಕೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾ ಯಿತು. ಸಮಾಜವಾದಿ ಪ್ರಭುತ್ವದಲ್ಲಿ ವಿರೋಧ ಪಕ್ಷಗಳಿಗೂ ಮನ್ನಣೆ ಇರುವಂತಾಗಬೇಕು ಎಂಬುದು ಮುಖ್ಯ ಬದಲಾವಣೆ ಚುನಾವಣೆಗಳ ಮೂಲಕ ಪಾರ್ಲಿಮೆಂಟಲ್ಲಿ ಬಹುಮತ ಪಡೆದು ಆ ಮೂಲಕ ಸಮಾಜವಾದಿ ಸರಕಾರ ರಚಿಸುವ ಸಾಧ್ಯತೆ ಯನ್ನು ಹಾಗೂ ಪಾರ್ಲಿಮೆಂಟ್ ಜನರ ಆಶೋತ್ತರಗಳಿಗೆ ಸ್ಪಂದಿಸುವಂತಾಗಬೇಕು ಎಂದು ಈ ಅಧಿವೇಶನ ನಿರ್ಧರಿಸಿತ್ತು ಎಂದು ಹೇಳಿದರು.

1950, 1957 ಮತ್ತು 1963ರ ಜಾಗತಿಕ ಕಮ್ಯುನಿಸ್ಟ್ ಅಧಿವೇಶನಗಳಲ್ಲಿ ಶಾಂತಿಯುತ ಕಾರ್ಯಕ್ರಮಗಳ ಮೂಲಕ ಸಮಾಜ ಸ್ಥಾಪಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಚೀನಾದ ಕಮ್ಯುನಿಸ್ಟ್ ಪಕ್ಷವು (ಸಿಪಿಸಿ) ಜಾಗತಿಕ ಕಮ್ಯುನಿಸ್ಟ್ ಅಧಿವೇಶನದ ನಿರ್ಣಯಗಳನ್ನು ಒಪ್ಪಿಕೊಂಡರೂ ಮುಂದೆ ಅವರ ವಿರುದ್ಧವಾಗಿ ಕೆಲಸ ಮಾಡಿತು. ಸಶಸ್ತ್ರ ಹೋರಾಟ ಹಾಗೂ ಜನರ ಪ್ರಜಾಪ್ರಭುತ್ವಗಳನ್ನು ಬೆಂಬಲಿಸಿದ ಸಿಪಿಸಿ ಹಾಗೂ ಮಾವೋವಾದಗಳಿಗೆ ಸಾಕಷ್ಟು ಬೆಂಬಲವೂ ದೊರೆ ಯಿತು. ಅನೇಕ ದೇಶದ ಕಮ್ಯುನಿಸ್ಟ್ ಪಕ್ಷಗಳು ಈ ಚೀನಾ ಮಾರ್ಗವನ್ನು ಒಪ್ಪಿಕೊಂಡು ಕಮ್ಯುನಿಸ್ಟ್ ಚಳುವಳಿಯ ವಿಭಜ ನೆಗೆ ಕಾರಣವಾದವು ಭಾರತ ಕಮ್ಯುನಿಸ್ಟ್ ಪಕ್ಷಕ್ಕೂ ಈ ಬಿಸಿ ತಟ್ಟಿ 1964ರಲ್ಲಿ ಪಕ್ಷ ವಿಭಜನೆಗೆ ಕಾರಣವಾಯಿತು ಎಂದು ಹೆಳಿದರು.

ವಿಜವಾಡದಲ್ಲಿ ವಿಭಜನೆಯ ಗಾಳಿ: 1961ರಲ್ಲಿ ನಡೆದ ವಿಜಯವಾಡ ಮಹಾಧಿವೇಶನದಲ್ಲೇ ವಿಭಜನೆಯ ಗಾಳಿ ಬೀಸಲಾ ರಂಭಿಸಿತ್ತು. ಬಿಟಿಆರ್ ಮಾರ್ಗದವರು ಮತ್ತು ಚೀನಾದ ಪರವಿದ್ದವರು ಅವಾಗಲೇ ಕೆಲವು ಸಮಾನಾಂತರ ಸಂಘಟನೆ ಗಳನ್ನು ಕಟ್ಟಿಕೊಂಡಿದ್ದರು.

1954ರಲ್ಲಿ ಸಿಪಿಐ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಪೂರ್ವನಿರ್ಧರಿತವೋ ಎಂಬಂತೆ 101 ಸಮಿತಿ ಸದಸ್ಯರ ಪೈಕಿ 32 ಸದಸ್ಯರು ಹೊರನಡೆದು ಹೊಸ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿದರು. ಅವರು ಸಿಪಿಐಯನ್ನು ಪರಿಷ್ಕರಣವಾದಿಗಳು ಮತ್ತು ಬಲಪಂಥೀಯರು ಎಂದು ಕರೆದರು. ಭಾರತ ಕಮ್ಯುನಿಸ್ಟ್ ಪಕ್ಷವು 1964ರಲ್ಲೇ ರಾಷ್ಟ್ರೀಯ ಪ್ರಜಾಪ್ರಭುತ್ವ ಪರಿಕಲ್ಪನೆ ಯನ್ನು ಒಪ್ಪಿಕೊಂಡಿತಾದರೂ, ಸಿಪಿಎಂ ಜನತಾ ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಮುಂದುವರಿಸಿಕೊಂಡು ಹೋಯಿತು. 2012 ಹಾಗೂ 2015ರ ವರೆಗೂ ಸಿಪಿಎಂ ಈ ವಿಭಜನೆಯನ್ನು ಸಮರ್ಥಿಸಿಕೊಂಡಿದೆ. ಆದರೆ ಸಿಪಿಐ ಈ ವಿಭಜನೆ ಕಮ್ಯುನಿಸ್ಟ್ ಚಳುವಳಿಯ ಹಿಂಜರಿತಕ್ಕೆ ಕಾರಣವಾಗಿದೆ ಎಂದು ಹೇಳಿತ್ತು ಎಂದರು.

ಸಿಪಿಐ ಪ್ರಕಾರ ರಾಷ್ಟ್ರೀಯ ಪ್ರಜಾಪ್ರಭುತ್ವವು ಬದಲಾವಣೆಯ ಒಂದು ಹಂತವಾಗಿದೆ. ಅದರ ಮುಖಂಡತ್ವ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟದ ಕೈಯಲ್ಲಿರುತ್ತದೆ. ಈ ಹಂತದಲ್ಲಿ ಶ್ರಮಿಕ ವರ್ಗದ ಮುಖಂಡತ್ವ ಸಾಧಿಸಲಾಗದು. ಕಾರ್ಮಿಕ ಮತ್ತು ಬಹುಜನರ ಒಕ್ಕೂಟ ಇಲ್ಲಿ ಮುಖ್ಯವಾಗಿರುತ್ತದೆ. ಮುಂದಿನ ಹಂತಗಳಲ್ಲಿ ಕಾರ್ಮಿಕ ವರ್ಗದ ಹಿಡಿತ ಹೆಚ್ಚಾಗುತ್ತಾ ಹೋಗಿ ಪೂರ್ಣ ಹಿಡಿತ ಸಾಧಿಸಲಾಗುತ್ತದೆ.

ಸಿಪಿಎಂ ಜನತಾ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸುತ್ತದೆ. 2000ನೇ ಇಸವಿಯವರೆಗೆ ಅವರ ನೀತಿಗಳಲ್ಲಿ ಹೆಚ್ಚಿನ ಬದಲಾ ವಣೆಗಳೇನೂ ಕಂಡುಬಂದಿಲ್ಲ. ಅವರ ಪ್ರಕಾರ ಜನತಾ ಪ್ರಜಾಪ್ರಭುತ್ವದ ಮುಂದಾಳುತ್ವ ಕಾರ್ಮಿಕ ವರ್ಗ ಮತ್ತು ಕಾರ್ಮಿಕರ ರಾಜಕೀಯ ಪಕ್ಷವಾದ ಸಿಪಿಎಂನ ಮುಂದಾಳುತ್ವದಲ್ಲಿಲ್ಲದಿದ್ದರೆ ಕ್ರಾಂತಿಯು ಅಸಾಧ್ಯವೇ ಆಗುತ್ತದೆ. ಅವರು ಬೇರೆ ಪಕ್ಷ ಅಥವಾ ಸಂಘಟನೆಗಳ ಪಾತ್ರವನ್ನು ಒಪ್ಪುವುದಿಲ್ಲ. ಇವರ ಈ ನಿಲುವಿನಿಂದಾಗಿ ಸಿಪಿಎಂ ಮತ್ತು ಎಡಪಕ್ಷಗಳು ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು ಎಂದರು.

ಬಸುಗೆ ಪ್ರಧಾನಿ ಹುದ್ದೆ ತಪ್ಪಲು ಇಬ್ಬರ ಹಠಮಾರಿತನ ಕಾರಣ: ಜ್ಯೋತಿ ಬಸುರವರು ದೇಶದ ಪ್ರಧಾನಮಂತ್ರಿ ಯಾಗ ಬೇಕೆಂದು ಮಿತ್ರಪಕ್ಷಗಳು ಕರೆ ಕೊಟ್ಟಾಗ ಸಿಪಿಎಂ ಪಾಲಿಟ್ ಬ್ಯೂರೊದ ಕೆಲ ಸದಸ್ಯರು ಒಪ್ಪಿಕೊಳ್ಳಲಿಲ್ಲ. ಇಬ್ಬರು ನಾಯಕರ ಹಠಮಾರಿತನದ ನಿಲುವಿನಿಂದಾಗಿ ಈ ಅವಕಾಶ ತಪ್ಪಿತು. ಅವರ ಪ್ರಕಾರ ಸಿಪಿಎಂ ಸರಕಾರದ ಮುಂದಾಳುತ್ವದಲ್ಲಿಲ್ಲದ ಕಾರಣ ಬಸುರವರು ಪ್ರಧಾನ ಮಂತ್ರಿ ಆಗಲು ಸಾಧ್ಯವಿರಲಿಲ್ಲ. ಇದೇ ಕಾರಣದಿಂದಾಗಿ ಯುಪಿಎ ಸರಕಾರದಲ್ಲೂ ಎಡರಂಗವು ಭಾಗವಹಿಸಲಿಲ್ಲ. ಜನತಾ ಪ್ರಜಾಪ್ರಭುತ್ವವಾದಿ ಕ್ರಾಂತಿಯು ಕಾರ್ಮಿಕ ವರ್ಗದ ಮುಂದಾಳು ತ್ವದಲ್ಲಿ ಮಾತ್ರ ಸಾಧ್ಯ ಎಂದು ಸಿಪಿಎಂ ಹೇಳುತ್ತದೆ. ಜನರ ಪ್ರಜಾಪ್ರಭುತ್ವ ಮತ್ತು ಸಮಾಜವಾದಿ ಬದಲಾವಣೆ ತರಲು ಶಾಂತಿಯುತ ಮಾರ್ಗ ಅನುಸರಿಸಬೇಕು ಎಂದು ಸಿಪಿಎಂ ಹೇಳುತ್ತದೆ ಆದರೆ ಆಡಳಿತ ಶಕ್ತಿಗಳು ಅಧಿಕಾರವನ್ನು ಸ್ವಯಂ ಪ್ರೇರಣೆಯಿಂದ ಬಿಟ್ಟು ಕೊಡದಿದ್ದಲ್ಲಿ ಸಶಸ್ತ್ರ ಹೋರಾಟ ಅಗತ್ಯವಾಗಬಹುದು ಎಂದು ಕೂಡ ಹೇಳುತ್ತದೆ. ಕ್ರಾಂತಿಗೆ ಅಗತ್ಯ ವಿದೆ ಎಂದು ಹೇಳುತ್ತದೆ. ಪ್ರಜಾಪ್ರಭುತ್ವವಾದಿ ಕ್ರಾಂತಿಯನ್ನು ಕಾರ್ಮಿಕ ಸಿಪಿಐ ನಾಲ್ಕೂ ವರ್ಗಗಳ ಮುಂದಾಳುತ್ವವು ರಾಷ್ಟ್ರೀಯ ಪ್ರಜಾಪ್ರಭುತ್ವ ವರ್ಗ, ಗ್ರಾಮೀಣ ಜನಸಮುದಾಯ, ರೈತರು, ಪ್ರಗತಿಪರ ಬುದ್ಧ್ಧಿಜೀವಿಗಳು, ಮಧ್ಯಮ ವರ್ಗದ ಕ್ರಾಂತಿಕಾರಿಗಳು, ಸಣ್ಣ ಮತ್ತು ಮಧ್ಯರು ಬೂರ್ಶ್ವಾಗಳು ಮುಂತಾದವರು ಒಟ್ಟು ಸೇರಿ ನಡೆಸಬೇಕೆಂದು 2015ರ ಪಾಂಡಿಚೇರಿ ಅಧಿವೇಶನದಲ್ಲಿ ಸಿಪಿಐ ತೀರ್ಮಾನಿಸಿತ್ತು ಎಂದರು.

*ಸ್ಪಷ್ಟತೆ ಇಲ್ಲ: ಇಂದಿನ ದಿನಗಳಲ್ಲಿ ವಿತ್ತೀಯ ಬಂಡವಾಳ ಹಾಗೂ ಕಾರ್ಪರೇಟ್ ಬಂಡವಾಳಗಳ ಪಾತ್ರ ಬಹಳಷ್ಟು ಹೆಚ್ಚಿದೆ. ಸಿಪಿಐ ಈ ಬಗ್ಗೆ ತನ್ನ ಕಾಳಜಿ ವ್ಯಕ್ತಪಡಿಸಿದ್ದರೂ ಸಿಪಿಎಂ ಈ ಬಗ್ಗೆ ಚಕಾರವೆತ್ತಿಲ್ಲ. ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ವನ್ನು ಎತ್ತಿ ಹಿಡಿದೆ ನಮ್ಮ ದೇಶದ ಸಂವಿಧಾನವನ್ನು ಸಿಪಿಐ ಗೌರವಿಸುತ್ತಾ ಇದು ಜನರ ಹೋರಾಟಗಳಿಗೆ ಅಂಗಣ ಒದಗಿ ಸುತ್ತದೆ ಎಂದು ಹೇಳುತ್ತದೆ. ನಮ್ಮ ಸಂವಿಧಾನ ಬಹಳ ಶಕ್ತಿಯುತವಾಗಿದ್ದು ಅದನ್ನು ಬದಲಿಸಲು ಮಾಡುವ ಪ್ರಯತ್ನ ಗಳನ್ನು ತೀವ್ರವಾಗಿ ಎದುರಿಸಿ ಆ ಶಕ್ತಿಗಳನ್ನು ಬಲಹೀನಗೊಳಿಸಬೇಕಿದೆ ಎಂದು ಸಿಪಿಐ ಭಾವಿಸುತ್ತದೆ. ಸಿಪಿಎಂ ಕಾರ್ಯ ಕ್ರಮಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದರು.

ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯರಾದ ಅನಿಲ್ ರಾಜಿಮ್‌ವಾಲೆ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಪ್ರಾಧ್ಯಾಪಕರಾದ ಪ್ರೊ. ಜಯರಾಜ್ ಅಮೀನ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಕೇಶವನ್ ವೇಲ್‌ತ್ತಾಟ್, ಡಾ. ಫಣಿರಾಜ್, ಅಜಯ್ ಮಾಧವನ್ ಭಾಗವಹಿಸಿದ್ದರು.

ಸಿಪಿಐ ಪಕ್ಷದ ಜಿಲ್ಲಾ ನಾಯಕ ಎಚ್.ವಿ. ರಾವ್ ಅವರು ಅನಿಲ್ ರಾಜಿಮ್‌ವಾಲೆ ಅವರ ಉಪನ್ಯಾಸದ ಆಯ್ದ ಭಾಗವನ್ನು ಕನ್ನಡಕ್ಕೆ ಅನುವಾದಿಸಿದರು.

ಸಿಪಿಐ ದ.ಕ. ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಿ. ಶೇಖರ್ ಅವರು ಅನಿಲ್ ರಾಜಿಮ್‌ವಾಲೆರನ್ನು ಗೌರವಿಸಿದರು. ಹೊಸತು ಪತ್ರಿಕೆಯ ಸಂಪಾದಕ ಹಾಗೂ ಚಿಂತಕರಾದ ಡಾ.ಸಿದ್ದನಗೌಡ ಪಾಟೀಲ್ ವಂದಿಸಿದರು. ಡಾ. ಬಿ.ಶ್ರೀನಿವಾಸ ಕಕ್ಕಿಲ್ಲಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News