ಎಲ್ಲವನ್ನು ನಾವೇ ನಿಯಂತ್ರಣ ಮಾಡುತ್ತೇವೆಂದು ಕೇಂದ್ರ ಸರಕಾರ ಹೇಳುವುದು ಸರಿಯಲ್ಲ: ದಿನೇಶ್ ಗುಂಡೂರಾವ್
ಮಂಗಳೂರು: ಎಲ್ಲವನ್ನು ನಾವೇ ನಿಯಂತ್ರಣ ಮಾಡುತ್ತೇವೆ ಎಂದು ಕೇಂದ್ರ ಸರಕಾರ ಹೇಳುವುದು ಸರಿಯಲ್ಲ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನೀಟ್ ಪರೀಕ್ಷೆಗೆ ಸಂಬಂಧಿಸಿ ಗುರುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು ನಾವು ಮೆಡಿಕಲ್ ಕಾಲೇಜು ಸ್ಥಾಪಿಸಿದ್ದು, ವಿದ್ಯಾರ್ಥಿಗಳು ಬೇರೆ ಕಡೆಯಿಂದ ಬಂದು ಡಾಕ್ಟರ್ ಓದಿಕೊಂಡು ಹೋಗುತ್ತಿದ್ದಾರೆ. ನೀಟ್ ಪದ್ಧತಿಯಿಂದ ನಮ್ಮ ಕಾಲೇಜಿನಲ್ಲಿ ನಮ್ಮ ಡಾಕ್ಟರ್ಸ್‌ಗೆ ಸೀಟು ಸಿಗುತ್ತಿಲ್ಲ. ಆಲ್ ಇಂಡಿಯಾದಿಂದ ಬಂದು ಸೀಟು ಪಡೆದುಕೊಂಡು ಹೋಗುತ್ತಾರೆ ಎಂದರು.
ನಮ್ಮ ಮಕ್ಕಳಿಗೆ ಸೀಟು ಸಿಗುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇಲ್ಲ. ನೀಟ್ ಬಗ್ಗೆ ಚರ್ಚೆ ಮಾಡಬೇಕಿದೆ, ಹಾಗಾಗಿ ನಾವು ಸಹ ನೀಟ್‌ಗೆ ವಿರೋಧ ವ್ಯಕ್ತಪಡಿಸಿದ್ದೇವೆ ಎಂದರು.
ನಾವು ಹೆಚ್ಚು ಮೆಡಿಕಲ್ ಕಾಲೇಜು ಸ್ಥಾಪಿಸಿದ್ದೇವೆ. ನೂರಾರು ಕೋಟಿ ರು. ಖರ್ಚು ಮಾಡಿ ಸರ್ಕಾರ ಮೆಡಿಕಲ್ ಕಾಲೇಜು ಮಾಡುತ್ತದೆ. ಆದರೆ ಇದರ ಪ್ರಯೋಜನ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ. ದೇಶದಲ್ಲಿ ಎಲ್ಲವನ್ನೂ ಕೇಂದ್ರದಿಂದಲೇ ನಿಯಂತ್ರಣ ಮಾಡುವುದು ಒಳ್ಳೆಯದಲ್ಲ. ನಾವು ಹೇಳಿದ ಪ್ರಕಾರ ನಡೆಯಬೇಕು ಎಂಬಂತೆ ಕೇಂದ್ರದ ವರ್ತನೆ ಇದೆ. ನಾವು ಅದನ್ನು ಈಗ ಫಾಲೋ ಮಾಡಲೇ ಬೇಕು. ಪಾರ್ಲಿಮೆಂಟ್ನಲ್ಲಿ ಕಾನೂನು ತಿದ್ದುಪಡಿ ಆಗಬೇಕು. ನೀಟ್ ಪರಿಷ್ಕರಣೆ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತಾರಾ ಎಂದು ನೋಡಬೇಕು ಎಂದಿದ್ದಾರೆ.