ಮಂಗಳೂರು | ಜ.17ರಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಪ್ರಾದೇಶಿಕ ಕೇಂದ್ರ ಕಚೇರಿಗೆ ಶಿಲಾನ್ಯಾಸ
ಮಂಗಳೂರು, ಜ.14: ರಾಜ್ಯ ಸರಕಾರದಿಂದ ಸ್ಥಾಪಿಸಲ್ಪಟ್ಟ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ(ಆರ್ ಜಿಯುಎಚ್ ಎಸ್)ದ ಮಂಗಳೂರು ಪ್ರಾದೇಶಿಕ ಕೇಂದ್ರ ಕಚೇರಿಗೆ ಜ.17ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಅಲೈಡ್ ಮತ್ತು ಆರೋಗ್ಯ ರಕ್ಷಣಾ ಮಂಡಳಿಯ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ಕರಾವಳಿಯಲ್ಲಿ ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆ ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿ ನಗರದ ಮೇರಿಹಿಲ್ ನಲ್ಲಿ ಆರ್ ಜಿಯುಎಚ್ ಎಸ್ನ ಹೊಸ ಪ್ರಾದೇಶಿಕ ಕೇಂದ್ರ ಆರಂಭವಾಗಲಿದೆ. ಈ ಕೇಂದ್ರವು ಕರಾವಳಿ ಹಾಗೂ ಸುತ್ತಮುತ್ತಲಿನ ಅಂಗಸಂಸ್ಥೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದರು.
ಈ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಅಂದಾಜು 25 ಕೋಟಿ ರೂ. ವೆಚ್ಚದ ವಿನೂತನ ಸಿಮ್ಯುಲೇಶನ್ ಲ್ಯಾಬ್, ಕ್ರೀಡಾ ಸಂಕೀರ್ಣ, ಸುಧಾರಿತ ಫಿಟ್ನೆಸ್ ಕೇಂದ್ರ, ಮನೋರಂಜನಾ ಸೌಲಭ್ಯ, ಹವಾನಿಯಂತ್ರಿತ ಸಭಾಂಗಣ, ಸುಧಾರಿತ ಸಂಶೋಧನಾ ಕೇಂದ್ರಗಳು, ಸೆಮಿನಾರ್ ಹಾಲ್ ನೊಂದಿಗೆ ಅಂದಾಜು 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಮತ್ತು ಭಾರತದ ಪ್ರಥಮ ಕೇಂದ್ರವಾಗಿ ಮೂಡಿಬರಲಿದೆ ಎಂದು ಅವರು ವಿವರ ನೀಡಿದರು.
ಜ.17ರಂದು ಮೇರಿ ಹಿಲ್ ನ ಅಬಕಾರಿ ಇಲಾಖೆ ಕಟ್ಟಡದ ಪಕ್ಕದಲ್ಲಿ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಆರ್ ಜಿಯುಎಚ್ ಎಸ್ ಸಹ ಕುಲಪತಿ ಡಾ.ಶರಣ್ ಪ್ರಕಾಶ್ ಪಾಟೀಲ್, ಸಂಸದ ಬ್ರಿಜೇಶ್ ಚೌಟ, ಶಾಸಕ ಡಾ.ಭರತ್ ಶೆಟ್ಟಿ, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ಸರಕಾರದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ.ತ್ರಿವೇಣಿ, ಆರ್ ಜಿಯುಎಚ್ ಎಸ್ ನ ಉಪ ಕುಲಪತಿ ಡಾ.ಎಂ.ಕೆ. ರಮೇಶ್ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಆರ್ಜಿ ಯುಎಚ್ ಎಸ್ ಸೆನೆಟ್ ಸದಸ್ಯ ಡಾ.ಶಿವಶರಣ್ ಶೆಟ್ಟಿ ತಿಳಿಸಿದರು.
ಶಿಲಾನ್ಯಾಸದ ಪೂರ್ವಭಾವಿಯಾಗಿ ಆರ್ ಜಿಯುಎಚ್ ಎಸ್ನ ಸಿಂಡಿಕೇಟ್ ಸಭೆ ಮತ್ತು ಸೆನೆಟ್ನ ವಾರ್ಷಿಕ ಸಭೆ ಜ.16ರಂದು ಅಪರಾಹ್ನ 2:30ಕ್ಕೆ ನಗರದ ಗೋಲ್ಡ್ ಫಿಂಚ್ ನಲ್ಲಿ ಆಯೋಜಿಸಲಾಗಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆರ್ ಜಿಯುಎಚ್ ಎಸ್ ನ ಸೆನೆಟ್ ಸದಸ್ಯರಾದ ಪ್ರೊ.ವೈಶಾಲಿ ಶ್ರೀಜಿತ್, ಡಾ.ಸಲೀಮುಲ್ಲಾ, ಡಾ.ಚರಿಶ್ಮಾ ಡಿಸಿಲ್ವ, ಡಾ.ಮುಹಮ್ಮದ್ ಸುಹೈಲ್ ಉಪಸ್ಥಿತರಿದ್ದರು.