ಕಡಬ: ಪ್ರಾಥಮಿಕ ಶಾಲಾ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅನ್ಯಾಯ; ಆರೋಪ

Update: 2024-09-05 07:28 GMT

ಸೆ. 05. ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಹಾಗೂ ಇಲ್ಲಿನ ಸೈಂಟ್ ಜೋಕಿಮ್ಸ್ ಹಾಗೂ ಸೈಂಟ್ ಆನ್ಸ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಸರಕಾರಿ ಶಾಲೆಯ ಖಾಸಗಿ ತರಬೇತುದಾರರನ್ನು ಪಂದ್ಯಾಟದ ವೇಳೆ ಅಂಕಣದೊಳಗೆ ಬಿಡದೆ ಇತರ ದೈಹಿಕ ಶಿಕ್ಷಣ ಶಿಕ್ಷಕರಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಮೊಗೇರಡ್ಕ ಶಾಲಾ ಎಸ್.ಡಿ.ಎಂ.ಸಿ ಯವರಿಂದ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ ಕುರಿತು ವರದಿಯಾಗಿದೆ.

ಸೆ. 03ರಂದು ನಡೆದ ಕಬಡ್ಡಿ ಪಂದ್ಯಾಟದ ವೇಳೆ ಕೊಂಬಾರು ಮೊಗೇರಡ್ಕ ಶಾಲೆಯ ವಿದ್ಯಾರ್ಥಿಗಳ ತಂಡದ ಕೋಚ್ ಅನ್ನು ಪ್ರಾರಂಭದಲ್ಲಿ ಅಂಕಣದೊಳಗೆ ಹೋಗಲು ಅನುಮತಿ ನಿರಾಕರಿಸಲಾಗಿತ್ತು. ನಂತರ ಸ್ಥಳದಲ್ಲಿ ಮಾತಿನ ಚಕಮಕಿ ನಡೆದ ಬಳಿಕ ಅಂಕಣದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತಾದರೂ ಇತರ ಕಾರಣಗಳಿಂದ ವಿದ್ಯಾರ್ಥಿಗಳಿಗೆ ಸಲಹೆ ನೀಡಲು ಕೋಚ್ ಅವರಿಗೆ ಸಾಧ್ಯವಾಗಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ಎಸ್ ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ತಂಡಕ್ಕೆ ವಲಯ ಮಟ್ಟದ ಪ್ರಾಥಮಿಕ ಶಾಲೆಯ ಕಬಡ್ಡಿ ಪಂದ್ಯಾಟದಲ್ಲಿ ಸರಕಾರಿ ಶಾಲಾ ಮಕ್ಕಳ ತಂಡಗಳಿಗೆ ಮೋಸ ಮಾಡಿರುವ ಬಗ್ಗೆ ದೂರು ನೀಡಲಾಗಿತ್ತು. ಪ್ರಸ್ತುತ ದೂರಿನ ಬಗ್ಗೆ ಅನ್ವೇಷಣೆ ಮಾಡಿದಾಗ ಸರಕಾರಿ ಶಾಲಾ ಮಕ್ಕಳಿಗೆ ಅನ್ಯಾಯವಾಗಿರುವುದು ತಿಳಿದು ಬಂದಿದೆ.

ರಾಜ್ಯದ ಹೆಚ್ಚಿನ ಶಾಲೆಗಳಲ್ಲಿ ದೈಹಿಕ ಶಿಕ್ಷಕ ಕೊರತೆ ಒಂದು ಕಡೆ ಆದರೆ ಮಕ್ಕಳ ದಾಖಲಾತಿ ಕಡಿಮೆ ಎನ್ನುವ ಕಾರಣದಿಂದ ದೈಹಿಕ ಶಿಕ್ಷಕರು ಇಲ್ಲದೆ ಇರುವ ಶಾಲೆಗಳು 60% ಇದೆ. ಈ ದೈಹಿಕ ಶಿಕ್ಷಕರು ಇಲ್ಲದೆ ಇರುವ ಶಾಲೆಗಳಲ್ಲಿ ಮಕ್ಕಳನ್ನು ಕ್ರೀಡೆಗಳಿಗೆ ಸಜ್ಜುಗೊಳಿಸುವ ಹೊಣೆಯನ್ನು ಶಾಲೆಗಳ ಹಿರಿಯ ವಿದ್ಯಾರ್ಥಿಗಳು, ಅಥವಾ ಸಮುದಾಯಗಳ ಸಹಕಾರದಿಂದ ನಡೆಯುತ್ತಿವೆ.

ಆದರೆ ಪುತ್ತೂರು ಶಿಕ್ಷಣಾಧಿಕಾರಿ ವ್ಯಾಪ್ತಿಯ ಕಡಬ ತಾಲೂಕಿನಲ್ಲಿ ನಡೆದಂತಹ ಕಬಡ್ಡಿ ಪಂದ್ಯಾಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಿನಲ್ಲಿ ಹೊರಡಿಸಿದಂತಹ ಒಂದು ಅದೇಶವು, ಸರಕಾರಿ ಶಾಲೆಗಳನ್ನು ಇಂತಹ ಪಂದ್ಯಾಟದಿಂದ ದೂರ ಮಾಡಿ ಕೇವಲ ಖಾಸಗಿ ಶಾಲೆಗೆ ಪೂರಕವಾಗಿರುವ ರೀತಿಯಲ್ಲಿರುವುದು ಆಶ್ಚರ್ಯಕರವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲದೆ ಇದ್ದ ಸಂದರ್ಭದಲ್ಲಿ ಮಕ್ಕಳಿಗೆ ತರಬೇತಿ ಕೊಟ್ಟ ತರಬೇತುದಾರರನ್ನು ಪಂದ್ಯಾಟ ನಡೆಯುವ ಸಂದರ್ಭದಲ್ಲಿ ಮಕ್ಕಳಿಗೆ ಮಾಹಿತಿ ನೀಡಲು ಅವಕಾಶ ಕೊಡದೆ ಇರುವುದು ಅಕ್ಷಮ್ಯ ಅಪರಾಧವಾಗಿದ್ದು, ಮಕ್ಕಳ ಹಕ್ಕುಗಳ ಉಲ್ಲಂಘನೆ, ಹಾಗೂ ಮಕ್ಕಳ ಮಧ್ಯೆ ಭೇದ ಭಾವವನ್ನು ಉಂಟು ಮಾಡಿ ಮಕ್ಕಳಿಗೆ ಸರಕಾರಿ ಶಾಲೆಗಳ ಮೇಲಿನ ಅಭಿಮಾನವನ್ನು ಇಲ್ಲದಾಗಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಆದೇಶದಲ್ಲಿ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರಿಗೆ ಮಾತ್ರ ಪಂದ್ಯಾಟದ ಸಮಯದಲ್ಲಿ ಮಕ್ಕಳೊಂದಿಗೆ ಇರಲು ಅವಕಾಶವನ್ನು ಕೊಟ್ಟಿದ್ದು ತರಬೇತಿ ಕೊಟ್ಟ ತರಬೇತುದಾರರಿಗೆ ಅವಕಾಶವನ್ನು ಕೊಡದೆ ಇರುವುದು ಆಶ್ಚರ್ಯವುಂಟು ಮಾಡುತ್ತಿದೆ. ಗುಂಪು ಪಂದ್ಯಾಟಗಳ ಬಗ್ಗೆ ಹಾಗೂ ಅದರಲ್ಲಿ ಭಾಗವಹಿಸುವ ಮಕ್ಕಳ ಬಗ್ಗೆ ತರಬೇತುದಾರರಿಗೆ ಹೆಚ್ಚಿನ ಅರಿವಿದ್ದು, ಪಾಠ ಮಾಡುವ ಶಿಕ್ಷಕರನ್ನು ಆಟದ ಸಮಯದಲ್ಲಿ ಮಕ್ಕಳೊಂದಿಗೆ ಇರಲು ಹೇಳುತ್ತಾ ಇರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.

ಈ ಆದೇಶವು ಕೇವಲ ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿ ಕೊಡಲು ಹಾಗೂ ಸರಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮಕ್ಕಳ ಹಕ್ಕುಗಳಿಂದ ವಂಚಿಸಿ, ಸಮುದಾಯವನ್ನು ಶಾಲೆಯಿಂದ ದೂರ ಮಾಡಲು ಮಾಡುವ ಹುನ್ನಾರದ ಹಾಗೆ ಕಾಣುತ್ತಿದೆ. ಇದರ ಬಗ್ಗೆ ಕೂಡಲೇ ತನಿಖೆ ನಡೆಸುವುದರೊಂದಿಗೆ ಇದೀಗ ಆಟದಿಂದ ವಂಚಿತರಾಗಿರುವ ಶಾಲೆಯ ತಂಡಗಳನ್ನು ಸೇರಿಸಿಕೊಂಡು ಮಗದೊಮ್ಮೆ ವಲಯ ಮಟ್ಟದ ಪಂದ್ಯಾಟ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಎಸ್ ಡಿ ಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News