ಕದ್ರಿ ಠಾಣೆಯ ಹೆಡ್ ಕಾನ್ ಸ್ಟೇಬಲ್ ಚಂದ್ರ ಅಡೂರು ನಿಧನ

Update: 2023-09-23 10:16 GMT

ಮಂಗಳೂರು, ಸೆ.23: ರಾಜ್ಯ ಗುಪ್ತ ವಾರ್ತೆ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಕದ್ರಿ ಠಾಣೆಯ ಹೆಡ್ ಕಾನ್ ಸ್ಟೇಬಲ್ ಚಂದ್ರ ಕೆ. ಅಡೂರು (48) ಶುಕ್ರವಾರ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಕಾಸರಗೋಡು ಜಿಲ್ಲೆಯ ಅಡೂರು ನಿವಾಸಿಯಾಗಿದ್ದ ಚಂದ್ರ ಕೆ. 1996ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಸಿಸಿಬಿ, ಸಿಸಿಆರ್ಬಿ, ಡಿಸಿಐಬಿ, ಸೆನ್, ಪಣಂಬೂರು, ಉಳ್ಳಾಲ, ಕಂಕನಾಡಿ, ಪಾಂಡೇಶ್ವರ, ಕದ್ರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಹೆಡ್ ಕಾನ್ ಸ್ಟೇಬಲ್ ಆಗಿದ್ದ ಅವರು ಎಎಸ್ಸೈ ಹುದ್ದೆಗೆ ಭಡ್ತಿ ಹೊಂದುವುದರಲ್ಲಿದ್ದರು.

ಅಪರಾಧ ಲೋಕದ ಆಳ ಅರಿವು ಹೊಂದಿದ್ದ ಚಂದ್ರ ಕೆ. ಅಡೂರು ಅನೇಕ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದರು. ಸಣ್ಣ ಪ್ರಾಯದಲ್ಲೇ ಇಲಾಖೆಯಲ್ಲಿ ಮೆರೆದ ಕರ್ತವ್ಯ ನಿಷ್ಠೆಯು ಅವರನ್ನು ರಾಷ್ಟ್ರಪತಿ ಪದಕವು ಅರಸಿ ಬಂದಿತ್ತು.

ಮೂರು ತಿಂಗಳ ಹಿಂದೆ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಅನಾರೋಗ್ಯಕ್ಕೀಡಾಗಿದ್ದ ಚಂದ್ರ ಕೆ. ಅಡೂರು ಬಳಿಕ ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News