ಆಪೊಲಿನಾರಿಸ್ ಡಿಸೋಜಗೆ ಕಲಾಕಾರ್ ಪುರಸ್ಕಾರ
ಮಂಗಳೂರು, ಅ.30: ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ಕೊಡಮಾಡುವ 19ನೇ ಕಲಾಕಾರ್ ಪುರಸ್ಕಾರಕ್ಕೆ ಕೊಂಕಣಿಯ ಹಿರಿಯ ಸಂಗೀತಗಾರ ಆಪೊಲಿನಾರಿಸ್ ಡಿಸೋಜ ಅವರನ್ನು ಆಯ್ಕೆ ಮಾಡಲಾಗಿದೆ.
2023ರ ನ.5ರಂದು ಸಂಜೆ 6ಕ್ಕೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯುವ 263ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುರಸ್ಕಾರವು 50,000 ರೂ. ನಗದು, ಸನ್ಮಾನ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿವೆ.
*1953ರಲ್ಲಿ ಜನಿಸಿದ ಆಪೊಲಿನಾರಿಸ್ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಯುವ ಪ್ರಾಯದಲ್ಲಿ ಮಂಗಳೂರಿನಲ್ಲಿ ಹಲವು ಗಾಯನ ಸ್ಪರ್ಧೆಗಳನ್ನು ಜಯಿಸಿದ ಅವರು ನಂತರ ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಗಾಯಕ ರಾಗಿ, ಸಾಹಿತ್ಯ ಮತ್ತು ಗೀತ ರಚನೆಕಾರರಾಗಿ ಪರಿಚಿತರಾದರು. 9 ಸಂಗೀತ ಸುರುಳಿಗಳನ್ನು ರಚಿಸಿದ್ದಾರೆ. ಸಂಗೀತದ 2 ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ತನ್ನದೇ ಯೂಟ್ಯೂಬ್ ಚಾನೆಲ್ ಮುಖಾಂತರ 250ಕ್ಕೂ ಮಿಕ್ಕಿ ಕೊಂಕಣಿ ಹಾಗೂ ಇಂಗ್ಲಿಷ್ ಭಕ್ತಿ ಗೀತೆಗಳನ್ನು ಪ್ರಸಾರ ಮಾಡಿದ್ದಾರೆ.
ಕ್ರೈಸ್ತ ಧಾರ್ಮಿಕ ಕಾರ್ಯಗಳಲ್ಲಿ ಲ್ಯಾಟಿನ್ ಬದಲು ಕೊಂಕಣಿಯ ಬಳಕೆ ಆರಂಭವಾದಾಗ ಅವರು ರಚಿಸಿದ ಹಲವಾರು ಭಕ್ತಿಗೀತೆಗಳು ಇಂದಿಗೂ ಜನಪ್ರಿಯವಾಗಿವೆ. 1976ರಲ್ಲಿ ಮಸ್ಕತ್‌ನಲ್ಲಿ ಪ್ರಪ್ರಥಮ ಕೊಂಕಣಿ ಕಾರ್ಯಕ್ರಮ ನಡೆಸಿದ್ದಾರೆ. ಆಪೊಲಿ ನೈಟ್ ಸಂಗೀತ ರಸ ಮಂಜರಿ ಸಾದರಪಡಿಸಿದ್ದಾರೆ. ಐದು ದಶಕಕ್ಕೂ ಮಿಕ್ಕಿ ಕೊಂಕಣಿ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ 2023ನೇ ಸಾಲಿನ ಕಲಾಕಾರ್ ಪುರಸ್ಕಾರಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.