ಕಾನ ಕಟ್ಲ ಸರಕಾರಿ ಶಾಲೆಯ ಭೂ ಹಗರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ: ಹೋರಾಟ ಸಮಿತಿ ಆರೋಪ
ಸುರತ್ಕಲ್ : ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾನ - ಕಟ್ಲ ಜನತಾಕಾಲನಿ ಇಲ್ಲಿನ 1.60 ಎಕ್ರೆ ಭೂ ಕಬಳಿಕೆ ಹಗರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂದು ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಸಂಚಾಲಕ, ಹಾಗೂ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆರೋಪಿಸಿದ್ದಾರೆ.
ಹೋರಾಟ ಸಮಿತಿಯ ನೇತೃತ್ವದಲ್ಲಿ ನವೆಂಬರ್ 27ರಂದು ನಡೆಯಲಿರುವ ಪ್ರತಿಭಟನಾ ಧರಣಿಯ ಕರಪತ್ರವನ್ನು ರವಿವಾರ ಶಾಲೆಯ ವಠಾರದಲ್ಲಿ ನಡೆಸಲಾದ ಸಭೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶಾಲೆಯ ನಿವೇಶನದಲ್ಲಿ ಬೃಹತ್ ಹಗರಣ ನಡೆಸಿ ಕಬಳಿಸಿರುವ ಕುರಿತು ಹೋರಾಟ ಸಮಿತಿ ಮತ್ತು ಗ್ರಾಮಸ್ಥರು ಪ್ರತಿಭಟಿಸುತ್ತಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ. ಆದರೂ ಜಿಲ್ಲಾಡಳಿತ ಉನ್ನತ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಲೀ ಸ್ಥಳಿಯರು ಜೊತೆ ಚರ್ಚಿಸುವುದಾಗಲೀ ಮಾಡಿಲ್ಲ. ಈ ಭೂ ಹಗರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ. ಮತ್ತು ಸರಕಾರಿ ಶಾಲೆಗಳ ಸಂರಕ್ಷಣೆ ಕುರಿತು ಅದಕ್ಕೆ ಇಚ್ಛಾಶಕ್ತಿ ಇಲ್ಲ ಎಂಬುವುದನ್ನು ಸಾರಿ ಹೇಳುತ್ತಿದೆ ಎಂದು ಅವರು ಗಂಭೀರ ಆರೋಪಿಸಿದರು.
ಕಾನ ಕಟ್ಲ ಸರಕಾರಿ ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಥಳಿಯರು ಪೋಷಕರು ಹಾಗೂ ಗ್ರಾಮಸ್ಥರು ಅವಿರತವಾಗಿ ಶ್ರಮಿಸುತ್ತಿದ್ದು, ನ.27ರಂದು ನಡೆಯಲಿರುವ ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟದ ಯಶಸ್ವಿಗೆ ಪ್ರತೀ ನಾಗರೀಕರು ಸಹಕರಿಸಬೇಕೆಂದು ಇದೇ ಸಂದರ್ಭ ಅವರು ಒತ್ತಾಯಿಸಿದರು.
ಇದೇ ಸಂದರ್ಭ ನ.27ರಂದು ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿರುವ ಬೃಹತ್ ಧರಣಿ ಸತ್ಯಾಗ್ರಹದ ಕುರಿತು ಸಮಾಲೋಚನೆ ನಡೆಸಿ, ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಐ ಮಾಜಿ ಅಧ್ಯಕ್ಷರಾದ ವಾರಿಜ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹೋರಾಟ ಸಮಿತಿ ಪ್ರಮುಖರಾದ ಶರೀಫ್, ಫಾರೂಕ್ ಜನತಾಕಾಲನಿ, ಶ್ರೀನಾಥ್ ಕುಲಾಲ್, ಬಿ.ಕೆ. ಮಕ್ಸೂದ್, ಆಸೀಫ್, ಅಶ್ರಫ್, ಶಬನಾ, ಸಿಸಿಲಿ ಡಿಸೋಜಾ, ಶೈಫರ್ ಆಲಿ, ಅಸ್ಕಾಫ್, ಐ.ಮುಹಮ್ಮದ್, ಸಾದಿಕ್ ಕಿಲ್ಪಾಡಿ, ಹನೀಫ್ ಇಡ್ಯಾ ಮುಂತಾದವರು ಉಪಸ್ಥಿತರಿದ್ದರು.