ಜನಾಕರ್ಷಣೆಯ ಕರಾವಳಿ ಉತ್ಸವಕ್ಕೆ ಸ್ಪೀಕರ್, ಉಸ್ತುವಾರಿ ಸಚಿವರ ಸೂಚನೆ

Update: 2024-12-13 13:16 GMT

ಮಂಗಳೂರು: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ಕರಾವಳಿ ಉತ್ಸವವನ್ನು ಜನಾಕರ್ಷಣೆಯ ಕಾರ್ಯಕ್ರಮವನ್ನಾಗಿ ಮಾಡಲು ಹೆಚ್ಚು ಒತ್ತು ನೀಡುವಂತೆ ಸ್ಪೀಕರ್ ಯು.ಟಿ.ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಕರಾವಳಿ ಉತ್ಸವ ಸಿದ್ಧತೆಗಳಬಗ್ಗೆ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು.

ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಕಲಾ ಪ್ರಕಾರಗಳ ಸಹಿತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿರುವ ವಿವಿಧ ಭಾಷಾ ಅಕಾಡಮಿಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸ್ಪೀಕರ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಹಲವು ವರ್ಷಗಳ ಬಳಿಕ ಕರಾವಳಿ ಉತ್ಸವ ನಡೆಯುತ್ತಿರುವುದರಿಂದ ವಿವಿಧ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಆಕರ್ಷಣೀಯ ಕಾರ್ಯಕ್ರಮಗಳನ್ನು ನಡೆಸಲು ಕ್ರಮಕೈಗೊಳ್ಳಬೇಕು. ಉತ್ಸವ ನಡೆಸಲು ಸ್ಥಳೀಯವಾಗಿ ಅಗತ್ಯ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಪ್ರಯತ್ನಿಸಬೇಕು. ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಕರಾವಳಿ ಉತ್ಸವದೊಂದಿಗೆ ಪರಿಸರ ಮತ್ತು ಪ್ರಕೃತಿ ಸ್ನೇಹಿ ಕಾರ್ಯಕ್ರಮಗಳನ್ನು ನಡೆಸಬೇಕು. ಈ ನಿಟ್ಟಿನಲ್ಲಿ ಸಸ್ಯಮೇಳ ಆಯೋಜಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ ಡಿ.೨೧ರಿಂದ ಕರಾವಳಿ ಉತ್ಸವವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಡಿ. ೨೮-೨೯ರಂದು ಪಣಂಬೂರಿನಲ್ಲಿ ಬೀಚ್ ಉತ್ಸವ, ಜನವರಿ ೪-೫ರಂದು ಕದ್ರಿ ಪಾರ್ಕ್‌ನಲ್ಲಿ ಯುವಉತ್ಸವ, ಆಯೋಜಿಸಲಾಗಿದೆ. ಜ. ೧೮-೧೯ರಂದು ಗಾಳಿಪಟ ಉತ್ಸವ ನಡೆಯಲಿದೆ. ಹರೇಕಳದಲ್ಲಿ ನದಿ ಉತ್ಸವ ಕಾರ್ಯಕ್ರಮ ನಡೆಯಲಿದೆ. ತುಳು, ಬ್ಯಾರಿ, ಕೊಂಕಣಿ ಅಕಾಡಮಿಗಳ ಸಹಯೋಗದಲ್ಲಿ ಸಾಂಸ್ಕೃತಿಕ ಪ್ರದರ್ಶನ ಕಾರ್ಯಕ್ರಮ ನಡೆಸಲು ಚರ್ಚಿಸಲಾಗಿದೆ ಎಂದರು.

ಸಭೆಯಲ್ಲಿ ದ.ಕ.ಜಿಪಂ ಸಿಇಒ ಡಾ.ಆನಂದ್ ಕೆ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಸಿ.ಎಲ್ ಆನಂದ್, ಅಪರ ಜಿಲ್ಲಾಧಿಕಾರಿ ಡಾ.ಜಿ ಸಂತೋಷ್ ಕುಮಾರ್, ಮುಡಾ ಆಯುಕ್ತ ನೂರ್‌ಜಹಾನ್ ಮತ್ತಿತರರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News