ಕೊಕ್ಕಡ: ಜಾತಿ ನಿಂದನೆ ಮಾಡಿ ದಲಿತ ವೃದ್ಧನಿಗೆ ಹಲ್ಲೆ; ಪ್ರಕರಣ ದಾಖಲು

Update: 2024-09-03 07:35 GMT

ಬೆಳ್ತಂಗಡಿ: ಮಳೆ ಬಂದ ಕಾರಣ ಅಂಗಡಿಯ ಜಗಲಿಯಲ್ಲಿ  ಕುಳಿತ‌ ದಲಿತ ವೃದ್ದನ ಮೇಲೆ ಅಂಗಡಿ ಮಾಲಿಕ ಜಾತಿ ನಿಂದನೆ ಮಾಡಿ ಮರದ ರೀಪಿನಿಂದ ಹಲ್ಲೆ ನಡೆಸಿದ ಘಟನೆ ಕೊಕ್ಕಡದಲ್ಲಿ ನಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

 ಕೊಕ್ಕಡ ಗ್ರಾಮದ ಮಂಚ ಮೊಗೇರ (67) ಎಂಬವರು ಹಲ್ಲೆಗೆ ಒಳಗಾದ ವ್ಯಕ್ತಿ. ಕೊಕ್ಕಡ ನಿವಾಸಿ ರಾಮಣ್ಣ ಗೌಡ  ಹಲ್ಲೆ ನಡೆಸಿದ ಆರೋಪಿ.

ಕೊಕ್ಕಡ ಪೇಟೆಯಿಂದ ಹಿಂದಿರುಗುತ್ತಿದ್ದ ವೇಳೆ ಮಳೆ ಬಂದ ಕಾರಣ  ಮಂಚ ಮೊಗೇರ ಅವರು, ದಣಿವಾರಿಸಲು ಕೊಕ್ಕಡ ಹಳ್ಳಿಂಗೇರಿಯ ಅಂಗಡಿಯೊಂದರ ಜಗಲಿಯಲ್ಲಿ ಕುಳಿತಿದ್ದರು. ಇದನ್ನು ಪ್ರಶ್ನಿಸಿದ  ಅಂಗಡಿ ಮಾಲಿಕ ರಾಮಣ್ಣ ಗೌಡರೊಂದಿಗೆ "ಸುಸ್ತಾದ ಕಾರಣಕ್ಕೆ ಕುಳಿತಿದ್ದೇನೆ  ಮಳೆ ನಿಂತ ಕೂಡಲೇ ಹೊರಡುತ್ತೇನೆ" ಎಂದು ಮಂಚ ಮೊಗೇರ ಅವರು ತಿಳಿಸಿದ್ದರು ಎನ್ನಲಾಗಿದೆ.

ಆದರೆ ಅಂಗಡಿಯ ಒಳಗೆ ಹೋದ ರಾಮಣ್ಣ ಗೌಡ ಮರದ ರೀಪಿನೊಂದಿಗೆ ಬಂದು ಜಾತಿ ನಿಂದನೆ ಮಾಡಿದ್ದಲ್ಲದೇ, ತಲೆ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದಾನೆ ಎಂದು ಧರ್ಮಸ್ಥಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಗೆ ಒಳಗಾದ ಮಂಚ ಮೊಗೇರ ಅವರನ್ನು ಮನೆಯವರು ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ತಲೆಗೆ ಹಾಗೂ ಬೆನ್ನಿಗೆ ಗಾಯಗಳಾಗಿವೆ.

ಧರ್ಮಸ್ಥಳ ಪೊಲೀಸರು ಹಲ್ಲೆಗೆ ಒಳಗಾದವರಿಂದ ಹೇಳಿಕೆಯನ್ನು ಪಡೆದು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News