ಕಮ್ಯೂನಿಟಿ ಸೆಂಟರ್ ಬಂಟ್ವಾಳದಲ್ಲೂ ಯಶಸ್ವಿಯಾಗಲಿ: ಅಬ್ದುಲ್ ರಝಾಕ್

Update: 2023-08-18 15:42 GMT

ಬಂಟ್ವಾಳ : ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ ಮಾತ್ರಕ್ಕೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ವಿದ್ಯಾರ್ಥಿ ವೇತನ ನೀಡುವುದರ ಜೊತೆಗೆ ವಿದ್ಯಾರ್ಥಿ ಸಮೂಹಕ್ಕೆ ಸರಿಯಾದ ಶೈಕ್ಷಣಿಕ ಮಾರ್ಗದರ್ಶನ, ತರಬೇತಿ, ಶಿಕ್ಷಣದ ಮೌಲ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು, ಜೊತೆಗೆ ಸಾಮಾಜಿಕ ಕಳಕಲಿ ಬೆಳೆಸುವ ಪ್ರಯತ್ನ ಆಗಬೇಕಿದೆ ಎಂದು ಸೌದಿ ಅರೇಬಿಯಾ ಜುಬೈಲ್ ನ ಕೆ.ಎಂ.ಟಿ. ಇದರ ಸಿಇಒ ಅಬ್ದುಲ್ ರಝಾಕ್ ಅಭಿಪ್ರಾಯಪಟ್ಟರು.

ಬಂಟ್ವಾಳ ಕಮ್ಯೂನಿಟಿ ಸೆಂಟರ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದ ಅವರು, ಪ್ರಸಕ್ತ ಬಂಟ್ವಾಳ ತಾಲೂಕಿನಲ್ಲಿ ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಒಂದು ಸಂಸ್ಥೆಯ ಅಗತ್ಯ ತುಂಬಾ ಇತ್ತು. ವಿದ್ಯಾರ್ಥಿ ವೇತನದ ಜೊತೆಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ, ಮಾರ್ಗದರ್ಶನ, ಕೌನ್ಸೆಲಿಂಗ್ ನಡೆಸುವ ನಿಟ್ಟಿನಲ್ಲಿ ಕಮ್ಯೂನಿಟಿ ಸೆಂಟರ್ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಕಮ್ಯುನಿಟಿ ಸೆಂಟರ್ ನ ಎಲ್ಲಾ ಕಾರ್ಯ ಚಟುವಟಿಕೆಯ ಜೊತೆ ನಾವಿದ್ದೇವೆ ಎಂದರು.

ಬಂಟ್ವಾಳ ತಾಲೂಕಿನಲ್ಲಿ ಹಲವು ತಿಂಗಳ ಅಧ್ಯಯನದ ಬಳಿಕ ಶುಭಾರಂಭಗೊಂಡ ಕಮ್ಯೂನಿಟಿ ಸೆಂಟರ್ ಅನ್ನು ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಸಿ.ಆರ್.ಡಿ.ಎಫ್. ಚೇರ್ ಮೆನ್ ಅಮ್ಜದ್ ಖಾನ್, ಶೈಕ್ಷಣಿಕ ತರಬೇತುದಾರ ರಫೀಕ್ ಮಾಸ್ಟರ್, ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್ ನ ಟ್ರಸ್ಟಿ ಸಲೀಂ ಅಲ್ತಾಫ್ ಫರಂಗಿಪೇಟೆ, ಬರಕ ಕಾಲೇಜಿನ ಮೌಲಾನ ಹನೀಫ್, ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ ಸಮಾಜಕ್ಕೆ ಅರ್ಪಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಕ್ಯಾರಿಯರ್ ಕೌನ್ಸಿಲಿಂಗ್, ಅವರ ಸಾಮರ್ಥ್ಯ ಪರೀಕ್ಷೆ, ವ್ಯಕ್ತಿತ್ವ ವಿಕಸ, ಕೌಶಲ್ಯ ಪೊಷಣೆ, ಸ್ಪರ್ಧಾತ್ಮಕ ಪರೀಕ್ಷೆಗೆ ನೆರವು, ವಿದ್ಯಾರ್ಥಿ ವೇತನ ಹಾಗೂ ವಿದ್ಯಾರ್ಥಿಗಳ ಎಲ್ಲಾ ಅಗತ್ಯತೆಯನ್ನೂ ಪೋರೈಸುವ ಈ ಸೆಂಟರ್ ತನ್ನ ನೀತಿ - ನಿಯಮದ ಮೂಲಕ ಮುನ್ನಡೆಯುತ್ತದೆ. ಈ ಮೊದಲು ಪುತ್ತೂರಿನಲ್ಲಿ ಆರಂಭಗೊಂಡ ಸೆಂಟರ್ ನ ಪದ್ಧತಿಯನ್ನೇ ಇಲ್ಲಿ ಅನ್ವಯಿಸಲು ಉದ್ದೇಶಿಸಲಾಗಿದೆ.

ಪತ್ರಕರ್ತ ಇಮ್ತಿಯಾಝ್ ಶಾ ತುಂಬೆ ಸ್ವಾಗತಿಸಿದರು. ಪುತ್ತೂರು ಕಮ್ಯೂನಿಟಿ ಸೆಂಟರ್ ನ ಸಂಚಾಲಕ ಹನೀಫ್ ಪುತ್ತೂರು ಧನ್ಯವಾದಗೈದರು. ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News