ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ; ಆರೋಪಿಗೆ ಜೈಲು ಶಿಕ್ಷೆ, ದಂಡ

Update: 2023-11-28 14:31 GMT

ಮಂಗಳೂರು, ನ.28: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್‌ಟಿಎಸ್‌ಸಿ-1) ನ್ಯಾಯಾಧೀಶೆ ಮಂಜುಳಾ ಇಟ್ಟಿ 6 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ವಿಜಯ್ ಪ್ರವೀಣ್ ಕುಟಿನ್ಹಾ (29) ಶಿಕ್ಷೆಗೊಳಗಾದ ಆರೋಪಿ.

2022ರ ಎ.20ರಂದು ಸಂಜೆ ಬಾಲಕಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಅಂಗಡಿ ಯೊಂದಕ್ಕೆ ತಿಂಡಿ ಖರೀದಿಸಲು ತೆರಳಿದಳು. ಆವಾಗ ಬೀಡಿ ಖರೀದಿಸಲು ಬಂದಿದ್ದ ಆರೋಪಿ ವಿಜಯ್ ಪ್ರವೀಣ್ ಕುಟಿನ್ಹಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಪೆಕ್ಟರ್ ಶರಣಪ್ಪ ಭಂಡಾರಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಆರೋಪಿಗೆ ಪೋಕ್ಸೋ ಕಾಯ್ದೆಯ ಕಲಂ 10ರಡಿ 6 ವರ್ಷಗಳ ಕಠಿಣ ಸಜೆ ಹಾಗೂ 20,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ, ಭಾರತೀಯ ದಂಡ ಸಂಹಿತೆಯ ಕಲಂ 354ರಡಿ ಯಲ್ಲಿ 3 ವರ್ಷಗಳ ಕಠಿಣ ಸಜೆ ಮತ್ತು 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 3 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತ ಬಾಲಕಿಗೆ ಸರಕಾರ 1 ಲ.ರೂ. ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೊ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News