ಮಂಗಳೂರು: ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಜು.22: ಪಣಂಬೂರು ಬೀಚ್‌ಗೆ ಹೋಗಿ ಹಿಂದಿರುಗುತ್ತಿದ್ದ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಳಪೆ ಮಠದ ಬಳಿಯ ನಿವಾಸಿ ದೀಕ್ಷಿತ್ ಯಾನೆ ದೀಕ್ಷಿತ್ ಅಳಪೆ (32), ಅಳಪೆ ಬಜಾಲ್ ಪರಂಜ್ಯೋತಿ ಭಜನಾ ಮಂದಿರ ಬಳಿಯ ನಿವಾಶಿ ಲಾಯ್ಡ್ ಪಿಂಟೊ (32) ಎಂದು ಪೊಲೀಸರು ಮಾಹಿತಿ ನೀಡಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಮತ್ತು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಪಣಂಬೂರು ಬೀಚ್ ಗೆ ಹೋಗಿ ವಾಪಾಸ್ ಬರುವಾಗ ಅವರನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಬಿಜೈ ಕಾಪಿಕಾಡ್ ನ 7ನೇ ಕ್ರಾಸ್ ನಲ್ಲಿ ವಿದ್ಯಾರ್ಥಿಗಳನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿ ವಿದ್ಯಾರ್ಥಿಗಳು ಉರ್ವ ಪೊಲೀಸ್ ಠಾಣೆಗೆ ತೆರಳಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದರು. ಈ ಸಂಬಂಧ ಕಾರ್ಯಪ್ರವೃತ್ತರಾದ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.