ಮಂಗಳೂರು| ನಕಲಿ ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದ ಆರೋಪ; ಬಾಂಗ್ಲಾದ ಪ್ರಜೆಯ ಬಂಧನ

Update: 2024-10-12 16:29 GMT

ಮಂಗಳೂರು, ಅ.12: ನಕಲಿ ದಾಖಲಾತಿ ನೀಡಿ ಪಾಸ್‌ಪೋರ್ಟ್ ಮಾಡಿಸಿ ದುಬೈಗೆ ವಿಮಾನದಲ್ಲಿ ಪ್ರಯಾಣಿಸಲು ಯತ್ನಿಸಿದ ಬಾಂಗ್ಲಾದೇಶದ ಪ್ರಜೆಯೊಬ್ಬನನ್ನು ಬಂಧಿಸಿರುವ ಘಟನೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿರುವುದು ವರದಿಯಾಗಿದೆ.

ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ಮಾಣಿಕ್ ಚೌಕ್‌ನ ಮಾಣಿಕ್ ಹುಸೈನ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮಾಣಿಕ್ ಅ.10ರಂದು ಸಂಜೆ 5:45 ಗಂಟೆಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ವಿಭಾಗ ಕೌಂಟರ್ ನಿಂದ ದುಬೈಗೆ ಪ್ರಯಾಣಿಸಲು ಯತ್ನಿಸಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವುದಾಗಿ ತಿಳಿದುಬಂದಿದೆ.

ಆರೋಪಿಯು ಇಮಿಗ್ರೇಶನ್ ಕೌಂಟರ್‌ನಲ್ಲಿ ಪಾಸ್‌ಪೋರ್ಟ್ ಹಾಗೂ ಇತರ ದಾಖಲೆಗಳನ್ನು ಹಾಜರುಪಡಿಸಿದಾಗ ಅಲ್ಲಿದ್ದ ಅಧಿಕಾರಿ ಕೆಸಿ ಸರಸ್ವತಿ ಅವರು ಪಾಸ್ ಪೋರ್ಟ್ ಮತ್ತು ದಾಖಲಾತಿಗಳನ್ನು ಪರಿಶೀಲನೆ ವೇಳೆ ಅನುಮಾನಗೊಂಡು ಆರೋಪಿಯನ್ನು ವಿಚಾರಣೆ ಮಾಡಿದಾಗ ಈತನು ಬಾಂಗ್ಲಾದೇಶದ ಪ್ರಜೆ ಎನ್ನುವುದು ಬಹಿರಂಗಗೊಂಡಿತು.

ಮಾಣಿಕ್ ಬಾಂಗ್ಲದೇಶದ ರಾಷ್ಟ್ರೀಯ ಗುರುತು ಚೀಟಿ ಸಂಖ್ಯೆ 601 ಆಗಿದ್ದು ಈತನು 2017 ರಲ್ಲಿ ಇಂಡೋ-ಬಾಂಗ್ಲಾ ಅಂತರ್‌ ರಾಷ್ಟ್ರೀಯ ಗಡೀರೇಖೆ ಲಾಲ್ ಗೊಲ್ ಮುರ್ಷಿದಬಾದ್ ಜಿಲ್ಲೆ ಪಶ್ಚಿಮ ಬಂಗಾಳ ಮೂಲಕ ಭಾರತ ಪ್ರವೇಶಿಸಿ ಚೆನ್ನೈ ಮುಖಾಂತರ ಮಂಗಳೂರಿಗೆ ಆಗಮಿಸಿ ಬಳಿಕ ಉಡುಪಿಗೆ ಹೋಗಿ ಅಲ್ಲಿ ಭಾರತೀಯ ನಿವಾಸಿ ಪರ್ವೇಝ್ ಎಂಬಾತನ ಮುಖಾಂತರ ಪಾಸ್ ಪೋರ್ಟ್ ಮಾಡಿಸಿರುವುದಾಗಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆ.

ಇಮಿಗ್ರೇಶನ್ ಅಧಿಕಾರಿ ಮತ್ತು ಭಾರತ ಸರಕಾರಕ್ಕೆ ವಂಚಿಸಿರುವ ಆರೋಪಿ ವಿರುದ್ಧ ಮತ್ತು ಈತನಿಗೆ ಭಾರತೀಯ ಪಾಸ್ ಪೋರ್ಟ್ ಪಡೆಯಲು ಸಹಕರಿಸಿದ ಪರ್ವೇಝ್  ವಿರುದ್ದ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News