ಮಂಗಳೂರು: ಬಾಡಿಗೆಗೆ ನೀಡುವ ನೆಪದಲ್ಲಿ ವಂಚನೆ ಆರೋಪ; ಪ್ರಕರಣ ದಾಖಲು

Update: 2023-11-28 16:56 GMT

ಮಂಗಳೂರು, ನ.28: ನಗರದ ಕಟ್ಟಡವೊಂದನ್ನು ಬಾಡಿಗೆಗೆ ನೀಡುವ ನೆಪದಲ್ಲಿ ವಾರಸುದಾರನಲ್ಲದ ವ್ಯಕ್ತಿಯೊಬ್ಬ ಮುಂಗಡ ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಮಠದಕಣಿಯಲ್ಲಿರುವ ಗ್ಲೋಬಲ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಕಟ್ಟಡದಲ್ಲಿ ತಿಂಗಳಿಗೆ 10 ಲಕ್ಷ ರೂ. ಬಾಡಿಗೆ, 40 ಲಕ್ಷ ರೂ. ಮುಂಗಡ ಠೇವಣಿಯನ್ನಿಟ್ಟು ಮಹೇಶ್ ಫೌಂಡೇಶನ್ ಸಂಸ್ಥೆಯನ್ನು ತಾನು ಸ್ಥಾಪಿಸಿದ್ದೆ. ಈ ಗ್ಲೋಬಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ರಾಮ್ ಮೋಹನ್ ರೈ ಎಂಬಾತ ತನಗೆ 2021ರ ಸೆ.30ರಂದು ಬಾಡಿಗೆ ಕರಾರಿನಂತೆ 30 ವರ್ಷಗಳಿಗೆ ಬಾಡಿಗೆಗೆ ನೀಡಿದ್ದರು. ರಾಮ್ ಮೋಹನ್ ರೈ ಗುರುದೇವ ಎಜುಕೇಶನ್ ಫೌಂಡೇಶನ್ ಸಂಸ್ಥೆ ನಡೆಸುತ್ತಿದ್ದು, ಗ್ಲೋಬಲ್ ಆಸ್ಪತ್ರೆಯ ಮಾಲಕ ತಾನೆಂದು ನಂಬಿಸಿದ್ದ. ಅದರಂತೆ ತಾನು ಮಾಸಿಕ 10 ಲಕ್ಷದಂತೆ 70.16 ಲಕ್ಷ ರೂ. ಬಾಡಿಗೆ ರೂಪದಲ್ಲಿ ನೀಡಿದ್ದೆ. ಆದರೆ ಗ್ಲೋಬಲ್ ಕಟ್ಟಡದ ನೈಜ ಮಾಲಕ ಡಾ. ಸುಶೀಲ್ ಮತ್ತು ಸುದರಾಮ್ ರೈ ಎಂದು ತನಗೆ ಮತ್ತೆ ತಿಳಿಯಿತು. ಇದರಿಂದ ರಾಮ್ ಮೋಹನ್ ರೈ ತನಗೆ 1,14,10,000 ರೂ. ವಂಚನೆ ಮಾಡಿರುವುದಾಗಿ ರತೀಶ್ ಬಿ.ಎನ್. ಎಂಬವರು ಸೈಬರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News