ಮಂಗಳೂರು: ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Update: 2023-09-28 16:07 GMT

ಮಂಗಳೂರು, ಸೆ.29: ನಗರ ಹೊರವಲಯದ ಅಡ್ಯಾರ್ ಪರಿಸರದಲ್ಲಿ ಜಾನುವಾರು ಅಕ್ರಮ ಸಾಗಾಟದ ತಂಡದ ಸದಸ್ಯರ ಕೊಲೆಗೆ ಸಂಚು ರೂಪಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಫರಂಗಿಪೇಟೆ ಸಮೀಪದ ಅಮೆಮಾರ್‌ನ ತಸ್ಲೀಮ್ ಯಾನೆ ಗರುಡ ತಸ್ಲೀಮ್ (34) ಮತ್ತು ಹೈದರಾಲಿ ಯಾನೆ ಹೈದು (26) ಬಂಧಿತ ಆರೋಪಿಗಳಾಗಿದ್ದಾರೆ.

ಫರಂಗಿಪೇಟೆ ಪರಿಸರದಲ್ಲಿ ಜಾನುವಾರು ಅಕ್ರಮ ಸಾಗಾಟದ ಎರಡು ತಂಡಗಳ ನಡುವೆ ಆಗಾಗ ಮಾತಿನ ಚಕಮಕಿ, ಗಲಾಟೆಯಾಗುತ್ತಿತ್ತು. ಗುರುವಾರ ತಸ್ಲೀಮ್ ಮತ್ತಾತನ ಸಹಚರರು ಇನ್ನೊಂದು ತಂಡದ ಕೊಲೆಗೆ ಸಂಚು ರೂಪಿಸಿ ತಲವಾರಿನೊಂದಿಗೆ ಹೊಂಚು ಹಾಕುತ್ತಿದ್ದ ಬಗ್ಗೆ ಮಾಹಿತಿ ಪಡೆದು ಆರೋಪಿಗಳನ್ನು ಪತ್ತೆ ಹಚ್ಚಿ ಕೊಲೆ ಸಂಚನ್ನು ವಿಫಲಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ತಲೆಮರೆಸಿ ಕೊಂಡಿರುವ ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿಗಳ ಪೈಕಿ ತಸ್ಲೀಮ್ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಹಾಗೂ ದರೋಡೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ, ಜಾನುವಾರು ಕಳ್ಳತನ ಪ್ರಕರಣ, ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣ ಗಳು, ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸಹಿತ 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನು 10 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ.

ಇನ್ನೋರ್ವ ಆರೋಪಿ ಹೈದರಾಲಿಯು ಈ ಹಿಂದೆ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ, ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣ ಹಾಗೂ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News