ಮಂಗಳೂರು: ಮಗು ಅಪಹರಣ ಪ್ರಕರಣ; ಆರೋಪಿ ಮಹಿಳೆಗೆ ಜೈಲು ಶಿಕ್ಷೆ, ದಂಡ

Update: 2024-02-03 13:42 GMT

ಮಂಗಳೂರು: ನಗರದ ರೈಲ್ವೆ ನಿಲ್ದಾಣ ಬಳಿ 7 ತಿಂಗಳ ಮಗುವನ್ನು ಅಪಹರಿಸಿದ ಪ್ರಕರಣದ ಆರೋಪಿ ರುಬಿಯಾ(44) ಎಂಬಾಕೆಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

2016ರ ಡಿಸೆಂಬರ್‌ನಲ್ಲಿ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ರುಬಿಯಾ ಅಲ್ಲೇ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಮಹಿಳೆಯೊಬ್ಬರ 7 ತಿಂಗಳ ಮಗುವನ್ನು 2017ರ ಜ.12ರಂದು ಅಪಹರಿಸಿದ್ದಳು. 2020 ಜ.22ರಂದು ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಿ ಮೊಹಲ್ಲಾ ಗ್ರಾಮದ ಮಸೀದಿಯೊಂದರ ಬಳಿ ಮಗುವಿನ ಜೊತೆ ಭಿಕ್ಷಾಟನೆ ಮಾಡುತ್ತಿದ್ದುದನ್ನು ಕಂಡ ಮಗುವಿನ ತಾಯಿಯು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅದರಂತೆ ಕಂಕನಾಡಿ ನಗರ ಪೊಲೀಸರು ಮಗು ಸಹಿತ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಮಂಗಳೂರರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೋಶೆ ಪ್ರೀತಿ ಕೆ.ಪಿ. ಅವರು ಆರೋಪಿಯ ವಿರುದ್ಧ ತೀರ್ಪು ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ-363 ಶಿಕ್ಷಾರ್ಹ ಕಲಂಗೆ 4ವರ್ಷ ಶಿಕ್ಷೆ 10 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ನಗರ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ರಾಮಕೃಷ್ಣ ಕೆ.ಕೆ. ಹಾಗೂ ಎಸ್ಸೈ ಪ್ರದೀಪ್ ಟಿ.ಆರ್. ಸಮಗ್ರ ತನಿಖೆ ನಡೆಸಿ 20 ಸಾಕ್ಷಿದಾರರ ಹೇಳಿಕೆ ಪಡೆದಿದ್ದರು. ಅಲ್ಲದೆ ಆರೋಪಿಯ ವಿರುದ್ಧ ಐಪಿಸಿ 363(2) ಮತ್ತು 370ರಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಜ್ಯೋತಿ ಪ್ರಮೋದ ನಾಯಕ ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News