ಮಂಗಳೂರು ಕಲ್ಲಿದ್ದಲು ಲಾರಿ ಮುಷ್ಕರ : ಸಮಸ್ಯೆ ಪರಿಹಾರಕ್ಕೆ ಸಚಿವರಿಗೆ ಮನವಿ

Update: 2023-09-24 12:50 GMT

ಬೆಂಗಳೂರು, ಸೆ.24:ನವ ಮಂಗಳೂರು ಕೋಲ್ ಟರ್ಮಿನಲ್ (ಜೆಎಸ್‌ಡಬ್ಲ್ಯು)ದಿಂದ ದಿನಂಪ್ರತಿ ಸಾವಿರಾರು ಮೆಟ್ರಿಕ್ ಟನ್ ಕಲ್ಲಿದ್ದಲು ಸಾಗಾಟ ಮಾಡಲಾಗುತ್ತಿದೆ. ಆದರೆ ಸರಕಾರ ನಿಗದಿಪಡಿಸಿದ ಕನಿಷ್ಟ ಬಾಡಿಗೆ ದರವನ್ನು ನೀಡದ ಕಾರಣ ಸಂಕಷ್ಟದಲ್ಲಿದ್ದೇವೆ. ಹಾಗಾಗಿ ಈ ಬಗ್ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಶನ್‌ನ ಪದಾಧಿಕಾರಿಗಳು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಸಚಿವರ ನಿವಾಸದಲ್ಲಿ ಭೇಟಿಯಾದ ಅಸೋಸಿಯೇಶನ್‌ನ ಪದಾಧಿಕಾರಿಗಳು ಸೆ.25ರಿಂದ ಲಾರಿ ಮಾಲಕರು ಸ್ವಯಂ ಪ್ರೇರಿತರಾಗಿ ಕಲ್ಲಿದ್ದಲು ಲಾರಿ ಮುಷ್ಕರ ನಡೆಸುವ ಬಗ್ಗೆ ಗಮನ ಸೆಳೆದರು. ಸರಕಾರ ನಿಗದಿಪಡಿಸಿದ ಲಾರಿ ಬಾಡಿಗೆ ದರಕ್ಕಿಂತ ಕಡಿಮೆ ಬಾಡಿಗೆ ನೀಡಲಾಗುತ್ತಿದೆ. ವಾಹನ ನಿರ್ವಹಣಾ ವೆಚ್ಚ ಅಧಿಕಗೊಂಡಿದ್ದು, ಕಳೆದ 10 ವರ್ಷಗಳಿಂದ ಒಂದೇ ಬಾಡಿಗೆದರ ನೀಡಲಾಗುತ್ತಿದೆ ಎಂದು ಪದಾಧಿಕಾರಿಗಳು ವಿವರಿಸಿದರು.

ಬಳ್ಳಾರಿ ಜಿಲ್ಲೆಯ ಕುಡಿತಿನಿಯಲ್ಲಿರುವ ಅದಾನಿ ಎಸಿಸಿಯು ಸಿಮೆಂಟ್ ಘಟಕವು ಮಂಗಳೂರು ಹಾಗೂ ಉತ್ತರ ಕೇರಳ ಭಾಗಕ್ಕೆ ಸರಕು ಸಾಗಾಟ ಮಾಡುವ ಲಾರಿಗಳಿಗೆ ನಿಯಮಾನುಸಾರ ಬಾಡಿಗೆ ನೀಡದೆ ಮಾಲಕರನ್ನು ವಂಚಿಸುತ್ತಿದೆ. ಒಂದು ಲಾರಿಗೆ 2 ಬಿಲ್ ನೀಡುವ ಮೂಲಕ ಓವರ್‌ಲೋಡ್ ನೀಡಿ ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ ಸಾರಿಗೆ ಅಧಿಕಾರಿಗಳ ಕಣ್ತಪ್ಪಿಸಿ ವಂಚನೆ ಎಸಗುತ್ತಿದೆ. ಕುಡಿತಿನಿ ಸಿಮೆಂಟ್ ಘಟಕಕ್ಕೆ ಲಾರಿಗಳನ್ನು ಕಳುಹಿಸದೆ ಕಳೆದ 13 ದಿನಗಳಿಂದ ಲಾರಿ ಮಾಲಕರು ಮುಷ್ಕರ ನಿರತರಾಗಿರುವ ಬಗ್ಗೆ ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಸುಶಾಂತ್ ಶೆಟ್ಟಿ ದೂರಿದರು.

ಸಾರಿಗೆ ಉದ್ಯಮಿ ಕಶ್ಯಪ್ ನಂದನ್, ಅಸೋಸಿಯೇಶನ್‌ನ ಜೊತೆ ಕಾರ್ಯದರ್ಶಿ ನಯನ್ ಕುಮಾರ್, ಸದಸ್ಯರಾದ ಝಕರಿಯ್ಯಾ ಹಾಜಿ ಆತೂರು, ಖಾಸಿಮ್ ಜಾಸ್ಮಿನ್ ಹೊಸ್ಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News