ಮಂಗಳೂರು: ಸಿಪಿಐ ಜನಾಗ್ರಹ ಚಳವಳಿ

Update: 2023-10-08 13:55 GMT

ಮಂಗಳೂರು, ಅ.8: ರಾಜ್ಯ ಸರಕಾರವು ಅಸಂಘಟಿತ ಕಾರ್ಮಿಕರಿಗಾಗಿ ಅಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಮತ್ತು ಸಹಾಯಕಿಯರಿಗೆ 10 ಸಾವಿರ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 8 ಸಾವಿರ ಮತ್ತು ಬಿಸಿ ಯೂಟ ಕಾರ್ಯಕರ್ತೆಯರಿಗೆ 6 ಸಾವಿರ ರೂ ಗೌರವಧನ ಹೆಚ್ಚಿಸುವ ವಾಗ್ದಾನವನ್ನು ಸರಕಾರ ಕೂಡಲೇ ಈಡೇರಿಸಬೇಕು ಎಂದು ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್ ಒತ್ತಾಯಿಸಿದ್ದಾರೆ.

ಸಿಪಿಐ ಕರೆಯಂತೆ ‘ಕೊಟ್ಟ ಭರವಸೆ ಈಡೇರಿಸಿ. ಜನರ ನೈಜ್ಯ ಸಮಸ್ಯೆಗಳನ್ನು ಪರಿಹರಿಸಿ’ ಎಂಬ ಘೋಷಣೆಯಡಿ ರಾಜ್ಯ ವ್ಯಾಪಿ ಜನಾಗ್ರಹ ಚಳವಳಿಯ ಅಂಗವಾಗಿ ನಗರದ ಮಿನಿ ವಿಧಾನಸೌಧದ ಮುಂದೆ ಶನಿವಾರ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಸಿಸಿ ಅವರು ಮಾತನಾಡುತ್ತಿದ್ದರು.

ಹಿಂದಿನ ಸರಕಾರ ಜಾರಿಗೊಳಿಸಿದ್ದ ಕೃಷಿ, ಎಪಿಎಂಸಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗೆ ವಿಸ್ತರಿಸಿದ್ದನ್ನು ಹಿಂತೆಗೆದು ಎಂಟು ಗಂಟೆಗೆ ಊರ್ಜಿತಗೊಳಿಸಬೇಕು, ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಕನಿಷ್ಟ ಐದು ಲಕ್ಷ ರೂ. ಸಹಾಯಧನ ನೀಡುವುದಲ್ಲದೆ ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಗೊಳಿಸಬೇಕು. ಹೈಕೋರ್ಟ್ ತೀರ್ಪಿನಂತೆ ಬೀಡಿ ಕಾರ್ಮಿಕರಿಗೆ ಬಾಕಿ ಮಜೂರಿ ನೀಡಬೇಕು. ಇಎಸ್‌ಐ ಸೌಲಭ್ಯಗಳನ್ನು ಜಾರಿಗೊಳಿಸಬೇಕು,ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು, ಶಾಲೆಗಳನ್ನು ಉನ್ನತೀಕರಿಸಿ ಶಿಕ್ಷಕರನ್ನು ನೇಮಿಸ ಬೇಕು, ಎಲ್ಲಾ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಮೂಲಭೂತ ಸೌಕರ್ಯ ಒದಗಿಸಬೇಕು. ಹೃದಯ, ಮಾನಸಿಕ, ಕ್ಯಾನ್ಸರ್ ರೋಗಿಗಳಿಗೆ ಜಯದೇವ, ನಿಮ್ಹಾನ್ಸ್, ಕಿದ್ವಾು ಮಾದರಿಯ ಹೈಟೆಕ್ ಆಸ್ಪತ್ರೆಗಳನ್ನು ಪ್ರತೀ ಜಿಲ್ಲೆಯಲ್ಲಿ ಸ್ಥಾಪಿಸಬೇಕು, ಮಹಿಳಾ ದೌರ್ಜನ್ಯಗಳನ್ನು ಹತ್ತಿಕ್ಕಲು ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು, ಮಂಗಳ ಮುಖಿಯರನ್ನು ಮುಖ್ಯವಾಹಿನಿಗೆ ತರಲು ಎಲ್ಲಾ ಸ್ಥರಗಳಲ್ಲೂ ಕಾಯ್ದಿರುಸುವಿಕೆಯ ಅವಕಾಶ ನೀಡಬೇಕು, ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಪರಿಗಣಿಸಬೇಕು, ಕೊಳಗೇರಿಗಳನ್ನು ಶ್ರಮಿಕ ನಿವಾಸ ಪ್ರದೇಶ ಎಂದು ನಾಮಕರಣ ಮಾಡಿ ಅವರಿಗೆ ನಿವೇಶನ ಮತ್ತು ವಸತಿ ಕಲ್ಪಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜನಾಗ್ರಹ ಚಳವಳಿ ನಡೆಯುತ್ತಿದೆ ಎಂದು ಬಿ. ಶೇಖರ್ ಹೇಳಿದರು.

ಪಕ್ಷದ ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಮಾತನಾಡಿದರು.

ಚಳವಳಿಯ ನೇತೃತ್ವವನ್ನು ಪಕ್ಷದ ಹಾಗೂ ಸಾಮೂಹಿಕ ಸಂಘಟನೆಗಳ ನಾಯಕರಾದ ಹೆಚ್.ವಿ.ರಾವ್, ಆರ್.ಡಿ ಸೋನ್ಸ್, ವಿ.ಎಸ್. ಬೇರಿಂಜ, ಬಿ. ನಾರಾಯಣ ಕಡೆಗೋಳಿ, ಕೃಷ್ಣಪ್ಪಪಿಲಿಕುಳ, ಜಗತ್‌ಪಾಲ್ ಕೋಡಿಕಲ್, ಸಂಜೀವಿ ಹಳೆಯಂಗಡಿ, ರೇವತಿ ಎಳಿಂಜೆ, ಗೀತಾ ಬಜಾಲ್, ಮೀನಾಕ್ಷಿ ಕಿನ್ನಿಗೋಳಿ, ಗ್ಲಾಡಿ ಡಿಸೋಜ, ಹೇಮಲತಾ ಕರ್ನಿರೆ, ದುಲೇಖ ಪಂಜಿಮೊಗರು, ರಘು ಮಾಲೆಮಾರ್, ಬೇಬಿ ಮಧ್ಯ ವಹಿಸಿದ್ದರು.

ಪಕ್ಷದ ಮಂಗಳೂರು ಕಾರ್ಯದರ್ಶಿ ಕರುಣಾರ್ ಮಾರಿಪಳ್ಳ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ತಿಮ್ಮಪ್ಪಕಾವೂರು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News