ಮಂಗಳೂರು: ಕಾಂಗ್ರೆಸ್ ಭವನದಲ್ಲಿ ಗಾಂಧಿ ಜಯಂತಿ , ಶಾಸ್ತ್ರಿ ಜನ್ಮ ದಿನಾಚರಣೆ

Update: 2023-10-02 13:24 GMT

ಮಂಗಳೂರು, ಅ.2: ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಕಾರ್ಯಕ್ರಮ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧಿ ಅವರು ಬ್ರಿಟಿಷರ, ದಬ್ಬಾಳಿಕೆ, ದೌರ್ಜನ್ಯವನ್ನು ಮೆಟ್ಟುನಿಂತು ದೇಶದ ಜನತೆಯ ಪ್ರೀತಿ, ವಿಶ್ವಾಸಗಳಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅವರ ನಡೆ-ನುಡಿ, ತತ್ವಾದರ್ಶ, ಅಹಿಂಸಾವಾದ ಜಗತ್ತಿಗೆ ಮಾರ್ಗದರ್ಶಕ. ಅವರು ದೇಶಕ್ಕೆ ಹಾಕಿ ಕೊಟ್ಟ ಸೂತ್ರಗಳು ದೇಶ ಮರೆಯಲು ಸಾಧ್ಯವಿಲ್ಲ. ಗಾಂಧಿ ಹಂತಕ ಗೋಡ್ಸೆಯನ್ನು ಮೆರೆಸುವುದು ದೇಶದ ದುರಂತ. ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವ್ಯಕ್ತಿತ್ವ, ಸರಳತೆ ಎಲ್ಲರಿಗೂ ಆದರ್ಶ ಎಂದು ಸ್ಮರಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದೇಶದಲ್ಲಿ ಅನೇಕ ರೀತಿಯ ಚಳವಳಿ ನಡೆದರೂ ಅಂತಿಮವಾಗಿ ಅಹಿಂಸಾ ಮಾರ್ಗ ಯಶಸ್ವಿ ಕಂಡಿತು. ಇದಕ್ಕಾಗಿ ಗಾಂಧಿ ಅವರನ್ನು ಜಗತ್ತಿನ ಜನರು ಮೆಚ್ಚುತ್ತಾರೆ. ಗಾಂಧಿ ಅವರು ವಿದ್ಯಾರ್ಥಿ ದೆಸೆಯಲ್ಲಿ ಕಪ್ಪು-ಬಿಳಿ ತಾರತಮ್ಯದ ವಿರುದ್ಧ ಹೋರಾಡಿ ಬಳಿಕ ಭಾರತಕ್ಕೆ ಬಂದು ಪ್ರಬಲ ಚಳವಳಿಯಲ್ಲಿ ತೊಡಗಿಸಿಕೊಂಡರು. ಪ್ರಧಾನಿ ಮೋದಿ ವಿದೇಶದಲ್ಲಿ ಗಾಂಧಿ ಬಗ್ಗೆ ಹೊಗಳುತ್ತಾರೆ. ಆದರೆ, ಅವರ ಶಿಷ್ಯರು ಭಾರತದಲ್ಲಿ ಅವಮಾನಿಸುತ್ತಾರೆ. ಇದು ಮೂರ್ಖ ಧೋರಣೆ. ಬಿಜೆಪಿಗೆ ಗಾಂಧಿ ಅವರ ಜಾತ್ಯತೀತ ನಿಲುವು, ಅಹಿಂಸಾ ತತ್ವ ಬಗ್ಗೆ ವಿಶ್ವಾಸವಿಲ್ಲ. ಮಹಾತ್ಮ ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸುವವರು ದೇಶ ದ್ರೋಹಿಗಳು ಎಂದು ಹೇಳಿದರು.

ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರಾಮಾಣಿಕ ಜೀವನ, ಸ್ವಾತಂತ್ರ್ಯ ಹೋರಾಟ, ಭಾರತೀಯನಿಗೆ ಪ್ರೇರಣೆ. ಸೈನಿಕರು ಮತ್ತು ರೈತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಶಾಸ್ತ್ರಿಯವರು ’ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ನೀಡಿದರು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ರಾಜ್ಯ ಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕ ಜೆ.ಆರ್.ಲೋಬೊ, ಸುರೇಶ್ ಬಳ್ಳಾಲ್, ಸದಾಶಿವ್ ಉಳ್ಳಾಲ್, ಲುಕ್ಮಾನ್ ಬಂಟ್ವಾಳ, ಶಾಹುಲ್ ಹಮೀದ್ ಕೆ.ಕೆ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲ್ಯಾನ್, ಜೆ.ಅಬ್ದುಲ್ ಸಲೀಂ, ಅಬ್ದುಲ್ ರವೂಫ್, ಮಾಜಿ ಮೇಯರ್ ಜೆಸಿಂತಾ ಆಲ್ಫ್ರೆಡ್, ಮಾಜಿ ಜಿಪಂ ಸದಸ್ಯ ತುಂಬೆ ಪ್ರಕಾಶ್ ಶೆಟ್ಟಿ, ನೀರಜ್ ಚಂದ್ರಪಾಲ್ ಮೊದಲಾದವರು ಉಪಸ್ಥಿತರಿದ್ದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News