ಮಂಗಳೂರು| ‘ಗೃಹಲಕ್ಷ್ಮಿಯ ಹಣ ಕೂಡಿಟ್ಟು ಮಗನ ಶಾಲಾ ಶುಲ್ಕ ಭರಿಸಿದೆ’
ಮಂಗಳೂರು, ಸೆ. 18: ‘ಗೃಹಲಕ್ಷ್ಮಿ ಯೋಜನೆಯ 10 ಕಂತುಗಳ ಹಣವನ್ನು ಕೂಡಿಟ್ಟು ಒಬ್ಬ ಮಗನ ಶಾಲಾ ಶುಲ್ಕವನ್ನು ಭರಿಸಿದ್ದೇನೆ. ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ನನ್ನಂತಹ ಒಂಟಿ ಪೋಷಕಿಗೆ ಮಕ್ಕಳ ವ್ಯಾಸಂಗಕ್ಕೆ ಗ್ಯಾರಂಟಿ ಯೋಜನೆ ಉಪಯೋಗ ಆಗಿದೆ. ಈ ಯೋಜನೆ ಮುಂದುವರಿಯಬೇಕು.
ಇದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿ ಬಂಟ್ವಾಳದ ಗಾಯತ್ರಿ ಎಂಬ ಮಹಿಳೆಯ ಮೆಚ್ಚುಗೆಯ ನುಡಿ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರಾನಾಥ್ ಜತೆಗಿನ ಸಂವಾದದ ವೇಳೆ ಫಲಾನುಭವಿ ಮಹಿಳೆಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರಲ್ಲದೆ, ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಆಗ್ರಹಿಸಿದರು.
ಮೂಡಬಿದ್ರೆಯ ಶಾಂತಿಗಿರಿ ಗ್ರಾಮದ ಅಶ್ವಿನಿ ಎಂಬವರು ಪ್ರತಿಕ್ರಿಯಿಸಿ, ಮನೆಗೆ ಅಗತ್ಯ ವಸ್ತುಗಳ ಖರೀದಿಗೆ ಹೊರ ಹೋಗಬೇಕಾದರೆ ಪತಿಯಲ್ಲಿ 100 ರೂ. ಕೇಳಿದರೆ 50 ರೂ. ಸಿಗುತ್ತಿತ್ತು. ಇದೀಗ 2000 ರೂ. ನಮ್ಮ ಕೈಗೇ ಸಿಗುವುದ ರಿಂದ ಸಣ್ಣಪುಟ್ಟ ಖರ್ಚಿಗೆ ಯಾರಲ್ಲೂ ಕೇಳುವ ಅಗತ್ಯವಿಲ್ಲ. ಮಕ್ಕಳಿಗೆ ಏನಾದರೂ ಕೊಡಿಸಬೇಕಿದ್ದರೆ, ಸೋಪು, ಪೇಸ್ಟ್ ಖರೀದಿಗೂ ಗೃಹಲಕ್ಷ್ಮಿ ಹಣ ಉಪಯೋಗವಾಗುತ್ತಿದೆ ಎಂದರು.
ಭಾರತಿ ಬೋಳಾರ್ ಎಂಬವರು ಮಾತನಾಡುತ್ತಾ, ಯುವನಿಧಿ ಹೊರತುಪಡಿಸಿ ಉಳಿದೆಲ್ಲಾ ಗ್ಯಾರಂಟಿಗಳ ಪ್ರಯೋಜ ವನ್ನು ಐದು ಮಂದಿ ಸದಸ್ಯರ ತಮ್ಮ ಕುಟುಂಬ ಪಡೆಯುತ್ತಿದೆ. ಗೃಹಲಕ್ಷ್ಮಿಯ ಹಣದಿಂದ ನಾವೇನೇ ಹೊರಗಡಯಿಂದ ಖರೀದಿ ಮಾಡಿದರೂ ತೆರಿಗೆ ರೂಪದಲ್ಲಿ ಮತ್ತೆ ಸರಕಾರದ ಬೊಕ್ಕಸ ಸೇರುತ್ತಿದೆ. ನಾಲ್ಕು ಗ್ಯಾರಂಟಿಗಳಿಂದ ತಮ್ಮ ಕುಟುಂಬಕ್ಕೆ ಮಾಸಿಕ 4300 ರೂ. ನಂತೆ ವಾರ್ಷಿಕ 51000 ರೂ. ಸರಕಾರದಿಂದ ದೊರೆಯುತ್ತಿದೆ. ಇಂತಹ ಯೋಜನೆ ನೀಡಿದ ಸಿದ್ದರಾಮಯ್ಯ ಸರಕಾರಕ್ಕೆ ಹ್ಯಾಟ್ಸಾಪ್. ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ, ಅದರಿಂದ ಸೋಮಾರಿಗಳಾ ಗುತ್ತಾರೆ ಎನ್ನುವವರು ನಿಜವಾಗಿಯೂ ಸೋಮಾರಿಗಳು. ಹಸಿವು, ಬಡತನದಿಂದ ಬಂದವರಿಗೆ ಮಾತ್ರ ಈ ಯೋಜನೆಗಳ ಪ್ರಯೋಜನ ತಿಳಿದಿರುತ್ತದೆ’ ಎಂದರು.
‘ಪತಿ ಇಲ್ಲದ ನಾನು ಮೂರು ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿ ಮನೆಯಲ್ಲಿ 10 ಮಂದಿಗೆ ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿಯಿಂದ ತುಂಬಾ ಪ್ರಯೋಜನವಾಗಿದೆ. ಸಿದ್ಧರಾಮಯ್ಯ ಅವರ ಈ ಉಪಕಾರ ಯಾವತ್ತೂ ಮರೆಯ ಲಾಗದು. ಅವರು ಪ್ರಧಾನಿ ಆಗಬೇಕು’ ಎಂದು ಹರೇಕಳದ ಅತಿಕಾ ಎಂಬವರು ಪ್ರತಿಕ್ರಿಯಿಸಿದರು.
ಕೂಲಿ ಕೆಲಸ ಮಾಡಿ ಮೂರು ಮಕ್ಕಳಲ್ಲಿ ಒಬ್ಬಾಕೆಗೆ ಸಾಲ ಮಾಡಿ ಮದುವೆ ಮಾಡಿದ್ದೆ. ಮಗ ವಿಕಲಚೇತನ. ಇನ್ನೊಬ್ಬ ಮಗಳು ಇತ್ತೀಚೆಗೆ ಕೆಲಸಕ್ಕೆ ಸೇರಿದ್ದಾಳೆ. ಮಗನ ಔಷಧಿಗೆ ಮಾಸಿಕ 2000 ರೂ. ಖರ್ಚಾಗುತ್ತಿತ್ತು. ಇದೀಗ ಗೃಹಲಕ್ಷ್ಮಿ ಹಣ ಅದಕ್ಕೆ ಉಪಯೋಗವಾಗುತ್ತಿದೆ ಎಂದು ಮೂಡಬಿದ್ರೆಯ ಲಲಿತಾ ಹೇಳಿದರು.
ಕೂಲಿ ಕೆಲಸ ಮಾಡುವ ನಮಗೆ ದಿನಕೂಲಿ ಸಿಗುವುದು. ಮಳೆಗಾಲದಲ್ಲಿ ಕೆಲಸವೇ ಇರುವುದಿಲ್ಲ. ಆ ಸಮಯದಲ್ಲಿ ವಿದ್ಯುತ್ ಬಿಲ್ ಕಟ್ಟಲೂ ತೊಂದರೆಯಾಗುತ್ತಿತ್ತು. ಆದರೆ ಇದೀಗ ಉಚಿತ ವಿದ್ಯುತ್ ಜತೆಗೆ ಗೃಹಲಕ್ಷ್ಮಿ, ಅನ್ನಭಾಗ್ಯದ ಯೋಜನೆಯೂ ಸಿಗುತ್ತಿದೆ ಎಂದು ಉಳ್ಳಾಲದ ಲವೀನಾ ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಜಿ.ಪಂ. ಸಿಇಒ ಡಾ. ಆನಂದ್, ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂಬ ಬಹಳಷ್ಟು ಊಹಾಪೋಹಗಳನ್ನು ಹೊಟ್ಟೆ ಉರಿ ಹೊಂದಿದವರು ಹರಿಯಬಿಟ್ಟಿದ್ದರು. ಆದರೆ ಗ್ಯಾರಂಟಿ ಯೋಜನೆಗಳು ಭರವಸೆ. ಭರವಸೆಯೇ ಬದುಕು. ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಯೋಜನೆ ಈಗಾಗಲೇ ದೇಶದ್ಯಾಂತ 5 ಐ ಪ್ರೋಗ್ರಾಂ ಹೆಸರಿನಲ್ಲಿ ಪ್ರಚಾರ ಪಡೆದಿದೆ. ಇದನ್ನು ಇತರರೂ ನಕಲು ಮಾಡುತ್ತಿದ್ದು, ಗ್ಯಾರಂಟಿ ಎಂಬ ಹೆಸರನ್ನೂ ಕದಿಯಲಾಗಿದೆ. ಗ್ಯಾರಂಟಿ ವಿರೋಧಿಸಿದವರೇ ಇಂದು ಅಂತಹ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಡಾ. ಪುಷ್ಪಾ ಅಮರನಾಥ್ ಹೇಳಿದರು.
‘ಅವಿವಾಹಿತೆಯಾಗಿರುವ ನಾನು ಅಣ್ಣಂದಿರ ಜತೆ ಇದ್ದೇನೆ. ಗೃಹಲಕ್ಷ್ಮಿಯಿಂದ ದೊರಕುವ ಹಣ ಔಷಧಿ ಖರ್ಚಿಗೆ ಬಳಸು ತ್ತಿದ್ದು, ಇದಕ್ಕಾಗಿ ಯಾರಲ್ಲೂ ಕೈಚಾಚದಂತಾಗಿದೆ. ನಮ್ಮಂತಹ ಬಡವರಿಗೆ ಇಂತಹ ಯೋಜನೆಗಳು ಮುಂದುವರಿಯ ಬೇಕು’ ಎಂದು ಮುಲ್ಕಿಯ ಲೀಲಾ ಎಂಬವರು ಗ್ಯಾರಂಟಿ ಯೋಜನೆಯ ಬಗ್ಗೆ ಶ್ಲಾಘಿಸಿದರು.