ಮಂಗಳೂರು: ವಿಮಾನ ಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ

Update: 2024-10-25 09:08 GMT

ಮಂಗಳೂರು, ಅ. 25: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2025ರ ಹಣಕಾಸು ವರ್ಷದ ಮೊದಲಾರ್ಧ ಮತ್ತು ದ್ವಿತೀಯ ತ್ರೈಮಾಸಿಕದಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ವಿಮಾನ ಯಾನಗಳಲ್ಲಿ ಉತ್ತಮ ನಿರ್ವಹಣೆ ತೋರಿದೆಯಲ್ಲದೆ, ಸಾಕಷ್ಟು ಏರಿಕೆ ಕಂಡು ಬಂದಿದೆ ಎಂದು ಪ್ರಕಟನೆ ತಿಳಿಸಿದೆ.

2025ರ ಮೊದಲ ತ್ರೈಮಾಸಿಕದಲ್ಲಿ ಮಂಗಳೂರು ವಿಮಾನ ನಿಲ್ದಾಣವು ಒಟ್ಟು 1,121,410 ಪ್ರಯಾಣಿಕರನ್ನು ನಿರ್ವಹಿಸಿದ್ದು, 2024ರ ಮೊದಲ ತ್ರೈಮಾಸಿಕದಲ್ಲಿ ನಿರ್ವಹಣೆ ಮಾಡಲಾದ ಪ್ರಯಾಣಿಕರ ಸಂಖ್ಯೆ 9,46,233 ಆಗಿತ್ತು. ಈ ಮೂಲಕ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 18.5ರಷ್ಟು ಪ್ರಗತಿ ಕಂಡು ಬಂದಿದೆ. ಪ್ರಸ್ತುತ ಆರು ದೇಶೀಯ ಮತ್ತು ಎಂಟು ಮಧ್ಯಪ್ರಾಚ್ಯ ಸ್ಥಳಗಳಿಗೆ ದೇಶೀಯ ವಿಮಾನಗಳನ್ನು ಒದಗಿಸುವ ವಿಮಾನ ನಿಲ್ದಾಣವು ಆ. 15, 2024 ರಂದು 7,402 ಪ್ರಯಾಣಿಕರನ್ನು ನಿರ್ವಹಿಸಿದೆ.

ದೇಶೀಯ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಶೇ. 25ರಷ್ಟು ಹೆಚ್ಚಳವಾಗಿದೆ. ಬೆಂಗಳೂರು ಮತ್ತು ಮುಂಬೈ ಪ್ರಯಾಣಿಕರ ಎರಡು ಪ್ರಮುಖ ಆದ್ಯತೆಯ ತಾಣಗಳಾಗಿದ್ದು, ಅಂತರರಾಷ್ಟ್ರೀಯ ಪ್ರಯಾಣದಲ್ಲಿಯೂ ಶೇ. 5.58ರಷ್ಟು ಹೆಚ್ಚಳವನ್ನು ಕಂಡಿದೆ. ದುಬೈ, ಮಸ್ಕತ್ ಮತ್ತು ದಮ್ಮಾಮ್ ಪ್ರಮುಖ ಮೂರು ಅಂತಾರಾಷ್ಟ್ರೀಯ ಗಮ್ಯತಾಣಗಳಾಗಿವೆ ಎಂದು ಅದಾನಿ ಸಂಸ್ಥೆಗೊಳಪಡುವ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News