ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ: ಏರ್‌ಲೈನ್ಸ್ ಪ್ರಯಾಣಿಕರ ಸಂಖ್ಯೆ ಏರಿಕೆ

Update: 2023-09-23 15:49 GMT

ಮಂಗಳೂರು, ಸೆ.23: ಕಳೆದ ಐದು ತಿಂಗಳ ಅವಧಿಯಲ್ಲಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ಅಂತರ್‌ರಾಷ್ಟ್ರೀಯ ಸಂಸ್ಥೆಗಳ ದೇಶೀಯ ಮತ್ತು ಅಂತರ್‌ ರಾಷ್ಟ್ರೀಯ ವಾಗಿ ಸಂಚರಿಸುವ ವಿಮಾನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಗಮನಾರ್ಹ ಏರಿಕೆ ಕಂಡು ಬಂದಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಎಪ್ರಿಲ್‌ನಿಂದ ಆಗಸ್ಟ್ ಅಂತ್ಯದ ತನಕ ಇಂಡಿಗೋ ಮತ್ತು ಏರ್ ಇಂಡಿಯಾ ವಿಮಾನಗಳಲ್ಲಿ ದೇಶಿಯವಾಗಿ ಶೇ 87.5ನಷ್ಟು ಪ್ರಯಾಣಿಕರ ಲೋಡ್‌ನ್ನು ದಾಖಲಿಸಿತ್ತು. ಇದೇ ವೇಳೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ಅಂತರ್‌ರಾಷ್ಟ್ರೀಯ ವಿಮಾನಗಳಲ್ಲಿರುವ ಸೀಟ್ ಸಾಮರ್ಥ್ಯದ ಪೈಕಿ ಶೇ 81.7ನಷ್ಟು ಭರ್ತಿಯಾಗಿತ್ತು.

ಚೆನ್ನೈ, ದಿಲ್ಲಿ , ಹೈದರಾಬಾದ್, ಮುಂಬೈ, ಮತ್ತು ಪುಣೆಯಿಂದ ಇಂಡಿಗೋ ಮತ್ತು ಏರ್ ಇಂಡಿಯಾದಿಂದ ಮಂಗಳೂರಿಗೆ ಬಂದಿಳಿಯುವ ವಿಮಾನಗಳಲ್ಲಿ 3,21,554 ಆಸನ ಸಾಮರ್ಥ್ಯದಲ್ಲಿ 2,80,739 ಭರ್ತಿಯಾಗಿದ್ದವು. ಮುಂಬೈನಿಂದ ಬರುವ ವಿಮಾನಗಳಲ್ಲಿ 1,23,836 ಮಂದಿಗೆ ಪ್ರಯಾಣಕ್ಕೆ ಇದ್ದ ಅವಕಾಶದ ಪೈಕಿ 1,12,973 ಪ್ರಯಾಣಿಕರು ಪ್ರಯಾಣಿ ಸಿದ್ದಾರೆ. ಶೇ 91.5ರಷ್ಟು ಸೀಟ್‌ಗಳು ಭರ್ತಿಯಾಗಿದ್ದವು. ಪುಣೆಯಿಂದ 11078 ( ಶೇ.69) ಪ್ರಯಾಣಿಕರು ಮಂಗಳೂರಿಗೆ ಬಂದಿದ್ದಾರೆ. ಸೀಟ್‌ಗಳ ಸಾಮರ್ಥ್ಯ 16,062 ಮಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಿಂದ ಹೊರಡುವ ದೇಶೀಯ ವಿಮಾನಗಳಿಗೆ ಕ್ರಮವಾಗಿ ಶೇ 89.91 ಮತ್ತು ಶೇ 89.66 ರಷ್ಟು ಆಸನಗಳು ಹೆಚ್ಚು ಕಡಿಮೆ ಭರ್ತಿಯಾಗಿದ್ದವು.

ಅಂತರ್‌ರಾಷ್ಟ್ರೀಯ ವಲಯದಲ್ಲಿ, ಏಪ್ರಿಲ್‌ನಿಂದ ಆಗಸ್ಟ್ ನಡುವೆ ಅಬುಧಾಬಿ, ಬಹರೈನ್, ದಮಾಮ್, ದೋಹಾ, ದುಬೈ, ಕುವೈತ್ ಮತ್ತು ಮಸ್ಕತ್‌ನಿಂದ 1,10,823 (ಶೇ 81.7) ಪ್ರಯಾಣಿಕರು ಮಂಗಳೂರಿಗೆ ಬಂದಿದ್ದಾರೆ. ಈ ಐದು ತಿಂಗಳುಗಳಲ್ಲಿ ಈ ಸ್ಥಳಗಳಿಗೆ ಆಫರ್‌ನ ಆಸನಗಳು 135626. ಮಂಗಳೂರಿನಿಂದ ಮೇಲಿನ ಸ್ಥಳಗಳಿಗೆ 1,12,930 ಪ್ರಯಾಣಿಕರು ನಿರ್ಗಮಿಸಿದ್ದಾರೆ. ವಿಮಾನಗಳಲ್ಲಿ 1,35,449 ಸಾಮರ್ಥ್ಯದಲ್ಲಿ 1,12,930 (ಶೇ 87.3) ಭರ್ತಿಯಾಗಿದ್ದವು.

ಮುಂಬರುವ ಚಳಿಗಾಲದ ವೇಳಾಪಟ್ಟಿಯಲ್ಲಿ ಹೆಚ್ಚುವರಿ ದೇಶೀಯ ವಿಮಾನಗಳ ಹಾರಾಟ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಮಂಗಳೂರಿಗೆ ಮತ್ತು ಮಂಗಳೂರಿನಿಂದ ಪ್ರಯಾಣಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News