ಮಂಗಳೂರು: ‘ಕುಡ್ಲ ರನ್ಸ್ ಫಾರ್ ನೋ ಡ್ರಗ್ಸ್’ ಕಾರ್ಯಕ್ರಮ

Update: 2023-12-03 15:24 GMT

ಮಂಗಳೂರು: ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಲೂರ್ಡ್ಸ್ ಕೇಂದ್ರೀಯ ಶಾಲೆಯ ಆಡಳಿತ ಹಾಗೂ ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ರವಿವಾರ ನಗರದಲ್ಲಿ ‘ಕುಡ್ಲ ರನ್ಸ್ ಫಾರ್ ನೋ ಡ್ರಗ್ಸ್’ ಕಾರ್ಯಕ್ರಮ ಜರುಗಿತು.

15,000 ಮೀ. ಓಟಕ್ಕೆ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮತ್ತು 5,000 ಮೀ.ಓಟಕ್ಕೆ ಲೂರ್ಡ್ಸ್ ಕೇಂದ್ರೀಯ ಶಾಲೆಯ ಆವರಣದಲ್ಲಿ ಚಾಲನೆ ನೀಡಲಾಯಿತು. ಉಪ ಪೊಲೀಸ್ ಆಯುಕ್ತ ಸಿದ್ಧಾರ್ಥ್ ಗೋಯಲ್ ಮಾದಕ ಪದಾರ್ಥದ ವಿರುದ್ಧ ಪ್ರಮಾಣ ಬೋಧಿಸಿದರು.

ಬಳಿಕ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡ್ರಗ್ಸ್ ಎಂಬ ಪದವನ್ನು ಅಪರಾಧದ ನಿಘಂಟುವಿನಿಂದ ಅಳಿಸಿ ಹಾಕಲು ಎಲ್ಲರೂ ಪ್ರಯತ್ನಿಸಬೇಕು. ಇದು ಸಮಾಜದ ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಮಾದಕ ಪದಾರ್ಥ ವಿರುದ್ಧದ ಹೋರಾಟದ ಓಟವನ್ನು ಮುಂದುವರಿಸಬೇಕು. ಉತ್ತಮ ಮಂಗಳೂರಿಗಾಗಿ ಎಲ್ಲರೂ ಒಟ್ಟಾಗಬೇಕು. ಪೊಲೀಸ್ ಇಲಾಖೆಯ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಫಾ. ಪ್ರಕಾಶ್ ಡಿಸೊಜ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ. ಅಜಿತ್ ಬಿ.ಮೆನೇಜಸ್, ಲೂರ್ಡ್ಸ್ ಕೇಂದ್ರೀಯ ಶಾಲೆಯ ಪ್ರಾಂಶುಪಾಲ ಫಾ. ರಾಬರ್ಡ್ ಡಿಸೋಜ, ಫಾ. ಮುಲ್ಲರ್ ವೈದ್ಯಕೀಯ ಕಾಲೇಜಿನ ಡೀನ್ ಡಾ.ಆ್ಯಂಟನಿ ಸಿಲ್ವನ್ ಡಿಸೋಜ, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ರಿಯೊ ಡಿಸೋಜ, ಫಾ.ವಿಲ್ಫ್ರೆಡ್, ಸಂತ ಜೋಸೆಫ್ ಕಾಲೇಜಿನ ವಿನೂತನ್ ಪಾಲ್ಗೊಂಡಿದ್ದರು.

ಚಂದ್ರಲೇಖಾ ಮತ್ತು ರಿತೇಶ್ ಡಿಕುನ್ಹಾ ಕಾರ್ಯಕ್ರಮ ನಿರೂಪಿಸಿದರು.

*ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ದೂರ ಅಂತರದ ಓಟಗಾರ್ತಿ ಆಳ್ವಾಸ್ ಕಾಲೇಜಿನ ಅಥ್ಲಿಟ್ ಚೈತ್ರಾ ದೇವಾಡಿಗ ಸಹಿತ ಹಲವು ಪ್ರಮುಖರು ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡಿದ್ದರು. ಕುಶಾಲನಗರದ ಅರ್ಚನಾ 15,000 ಮೀ.ನ ಮಹಿಳೆಯರ ವಿಭಾಗದಲ್ಲಿ ಮತ್ತು ಬೆಳಗಾವಿ ಜಿಲ್ಲೆಯ ಖಾನಾಪುರದ ವೈಭವ್ ಮಾರುತಿ ಪಾಟೀಲ 15,000 ಮೀ.ನ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. 5,000 ಮೀ.ಓಟದ 45 ವರ್ಷ ಮೇಲಿನವರ ವಿಭಾಗದಲ್ಲಿ ಮಡಿಕೇರಿಯ ಚಿನ್ನಪ್ಪ, 15ರಿಂದ 45 ವರ್ಷದೊಳಗಿನವರ ವಿಭಾಗದಲ್ಲಿ ಹಾವೇರಿ ಜಿಲ್ಲೆಯ ಸವಣೂರಿನ ಗೋವಿಂದರಾಜ, 15 ವರ್ಷಕ್ಕಿಂತ ಮೇಲಿನವರ 5,000 ಮೀ. ಓಟದಲ್ಲಿ ಚೈತ್ರಾ ದೇವಾಡಿಗ ಪ್ರಥಮ ಸ್ಥಾನ ಪಡೆದರು.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News