ಮಂಗಳೂರು| ಬಿಹಾರದ ಮಕ್ಕಳಿಗೆ ಕನ್ನಡ ಕಲಿಕೆ: ಐದು ಮಕ್ಕಳಿದ್ದ ಶಾಲೆಯಲ್ಲೀಗ 53 ಮಕ್ಕಳು!

Update: 2024-09-24 13:23 GMT

ಮಂಗಳೂರು: ಬಿಹಾರ ಮೂಲದ ಮಕ್ಕಳಿಗೆ ಕನ್ನಡ ಕಲಿಸುವ ಜತೆಗೆ, ಶಾಲೆಯ ಮೆಟ್ಟಿಲನ್ನೇ ಏರದಿದ್ದ ಮಕ್ಕಳಿಗೆ ಅಕ್ಷರ ಕಲಿಸುವ ಕಾರ್ಯವನ್ನು ನಗರದ ಶಾಲೆಯೊಂದರ ಮುಖ್ಯ ಶಿಕ್ಷಕಿ ನಿರ್ವಹಿಸುತ್ತಿದ್ದಾರೆ. ಈ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಐದು ಮಕ್ಕಳಿದ್ದ ಈ ಶಾಲೆಯಲ್ಲಿ ಕಳೆದ ಸುಮಾರು ಒಂದು ತಿಂಗಳ ಅವಧಿಯಲ್ಲಿ 53 ಮಕ್ಕಳು ಕಲಿಯುತ್ತಿದ್ದಾರೆ.

ಇದು ನಗರದ ದಕ್ಷಿಣ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಳಾರ ವೆಸ್ಟ್‌ನ ಉರ್ದು ಶಾಲೆಗೆ ತಿಂಗಳ ಹಿಂದಷ್ಟೇ ಮುಖ್ಯ ಶಿಕ್ಷಕಿಯಾಗಿ ನಿಯುಕ್ತಿಗೊಂಡಿರುವ ಗೀತಾ ಜುಡಿತ್ ಸಲ್ಡಾನಾ ಅವರ ಪರಿಶ್ರಮ ಇದಾಗಿದೆ. ಸೆ. 2ರಂದು ಜುಡಿತ್‌ರವರು ಮುಖ್ಯ ಶಿಕ್ಷಕಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದೇ ದಿನ 40ಕ್ಕೂ ಅಧಿಕ ಬಿಹಾರಿ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಸಿಕೊಂಡಿದ್ದಾರೆ. ಫಿಶ್‌ಮಿಲ್, ಮೀನುಗಾರಿಕಾ ಧಕ್ಕೆ ಸೇರಿದಂತೆ ಕೂಲಿ ಕಾರ್ಮಿಕರ ಮಕ್ಕಳನ್ನು ಅವರ ಪೋಷಕರ ಮನವೊಲಿಸಿ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

‘ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಸೇರುವ ಮೊದಲು ಕೆಲಸದ ನಡುವೆ ಬಿಡುವು ಮಾಡಿಕೊಂಡು ಕಾರ್ಮಿಕರು ಇರುವ ಪ್ರದೇಶಗಳಿಗೆ ತೆರಳಿ ಪೋಷಕರ ಮನೊಲಿಸುತ್ತಿದ್ದೆ. ಅವರಿಗೆ ಹೆಚ್ಚಿನ ಆಸಕ್ತಿ ಇಲ್ಲದ ಕಾರಣ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕರನ್ನು ಸಂಪರ್ಕಿಸಿ ಮಕ್ಕಳ ದಾಖಲಾತಿ ಮಾಡಲೆಂದೇ ಪೋಷಕರಿಗೆ ಬೋನಸ್ ಹಣ ನೀಡಿ ಶಾಲೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಯಿತು. ಈಗ ಮಕ್ಕಳೂ ಚುರುಕಿನಿಂದ ಶಾಲೆಗೆ ಬರುತ್ತಿದ್ದಾರೆ ಎಂದು ಗೀತಾ ಸಲ್ಡಾನಾ ಹೇಳುತ್ತಾರೆ.

ಹಿಂದೆ ಶಾಲೆಯಲ್ಲಿ ಇದ್ದ ಐದು ಮಂದಿ ಮಕ್ಕಳೂ ಬಿಹಾರದವರೇ ಆಗಿದ್ದಾರೆ. ಈಗ ಹೊಸತಾಗಿ 48 ಮಕ್ಕಳು ಸೇರಿದ್ದು. ಅವರೂ ಅದೇ ರಾಜ್ಯದವರು. ಹೊಸತಾಗಿ ಸೇರ್ಪಡೆಗೊಂಡ 48 ಮಕ್ಕಳು ವಿವಿಧ ವಯೋಮಾನದವರಾಗಿದ್ದು, ಅವರು ಯಾರೂ ಶಾಲೆಗೆ ಹೋಗದಿದ್ದರೂ ಅವರ ವಯಸ್ಸಿಗೆ ಅನುಗುಣವಾಗಿ 1ರಿಂದ 7ನೆ ತರಗತಿವರೆಗೆ ವಿವಿಧ ತರಗತಿಗಳಿಗೆ ದಾಖಲಾತಿ ಮಾಡಿಸಲಾಗಿದೆ. ಆರಂಭದಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ. ಇದೀಗ 20 ದಿನಗಳಲ್ಲಿಗಳಲ್ಲಿಯೇ ಕನ್ನಡ ಅಕ್ಷರಮಾಲೆ, ಅಂಕಿಗಳ ಕಲಿತಿದ್ದು, ಸರಳವಾದ ಕನ್ನಡ ವಾಕ್ಯ ರಚನೆಯನ್ನೂ ಆರಂಭಿಸಿದ್ದಾರೆ.

ಹಾಜಬ್ಬರ ಶಾಲೆಯ ಯಶಸ್ಸಿನ ರುವಾರಿ ಈ ಶಿಕ್ಷಕಿ

ಗೀತಾ ಜುಡಿತ್‌ರವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರ ಶಾಲೆ ಆರಂಭವಾದಾಗ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದವರು. 2003ರಲ್ಲಿ ನ್ಯೂ ಪಡ್ಪು ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಸೇರಿದ್ದ ಅವರು ಸುಮಾರು ಆರು ವರ್ಷಗಳ ಕಾಲ ಅಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಶಿಕ್ಷಕಿಯ ಅವಧಿಯಲ್ಲಿಯೇ ಒಂದು ಕೊಠಡಿಯಿದ್ದ ಶಾಲೆ ಐದಾರು ಕೊಠಡಿಗಳು ದೊರೆಯುವ ಜತೆಗೆ ಅಗತ್ಯ ಬೇಡಿಕೆಗಳ ಪತ್ರ ಬರೆಯುವ ಕಾರ್ಯವನ್ನೂ ಇವರೇ ನಿರ್ವಹಿಸುತ್ತಿದ್ದರು.

‘ಶಿಕ್ಷಣದಿಂದ ವಂಚಿತರಾಗುತ್ತಿದ್ದ ಮಕ್ಕಳಿಗೆ ಶಾಲೆಗೆ ಸೇರಿಸಿ ಅಕ್ಷರಾಭ್ಯಾಸ ಮಾಡಿಸಿರುವುದು ನೆಮ್ಮದಿ ನೀಡಿದೆ.’

-ಗೀತಾ ಜುಡಿತ್ ಸಲ್ಡಾನಾ, ಮುಖ್ಯ ಶಿಕ್ಷಕಿ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News