ಮಂಗಳೂರು| ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಸಂವಿಧಾನದ ರಕ್ಷಣೆಗಾಗಿ ಸಾಮೂಹಿಕ ಧರಣಿ ಸತ್ಯಾಗ್ರಹ

Update: 2024-08-14 16:21 GMT

ಮಂಗಳೂರು: ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನದ ಸಂರಕ್ಷಣೆಗಾಗಿ, ಕಾರ್ಮಿಕ ವರ್ಗದ ಹಕ್ಕುಗಳ ಉಳಿವಿಗಾಗಿ ಹಾಗೂ ಕಾರ್ಪೊರೇಟ್ ಪರ ನೀತಿಗಳನ್ನು ಹಿಮ್ಮೆಟ್ಟಿಸಲು ʼದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿʼ ಎಂಬ ಘೋಷಣೆಯೊಂದಿಗೆ ಕಾರ್ಮಿಕ ವರ್ಗದ ನೇತೃತ್ವದಲ್ಲಿ ಅಖಿಲ ಭಾರತ ಕರೆಯ ಮೇರೆಗೆ ನಗರದಲ್ಲಿ ಬುಧವಾರ ಅಹೋರಾತ್ರಿ ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು.

ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ದೇಶಕ್ಕೆ ಸ್ವಾತಂತ್ರ್ಯ ದೊರೆತು 77 ವರ್ಷಗಳಾದರೂ ದೇಶದ ಕಾರ್ಮಿಕ ವರ್ಗ ಹಾಗೂ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟದದಲ್ಲಿದೆ. ದೇಶದ ಆಳುವ ವರ್ಗ ಪ್ರಜ್ಞಾಪೂರ್ವಕವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುವ ಮೂಲಕ ಉಳ್ಳವರ ಹಿತ ಕಾಪಾಡಲು ತುದಿಗಾಲಲ್ಲಿ ನಿಂತಿದೆ ಎಂದು ಹೇಳಿದರು.

ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಕಾರ್ಮಿಕ ವರ್ಗದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಪ್ರಬಲ ಪ್ರತಿರೋಧವೊಡ್ಡಿದ್ದ ದೇಶದ ಕಾರ್ಮಿಕ ವರ್ಗಕ್ಕೆ ತನ್ನದೇ ಆದ ಹೋರಾಟದ ಪರಂಪರೆ ಇದೆ. ಆದರೆ ಇಂದು ಅಮೇರಿಕನ್ ಸಾಮ್ರಾಜ್ಯಶಾಹಿಗಳ ವಿರುದ್ಧ ಸಮರಶೀಲ ಹೋರಾಟ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.

ರೈತ ಸಂಘಟನೆಯ ಮುಖಂಡರಾದ ಕೆ.ಯಾದವ ಶೆಟ್ಟಿ, ಕಾರ್ಮಿಕ ನಾಯಕರಾದ ಬಿಎಂ.ಭಟ್, ಸುಕುಮಾರ್ ತೊಕ್ಕೊಟ್ಟು, ಸಿಪಿಎಂ ನಾಯಕರಾದ ಮುನೀರ್ ಕಾಟಿಪಳ್ಳ, ಜಯಂತಿ ಶೆಟ್ಟಿ, ಬ್ಯಾಂಕ್ ನೌಕರರ ಮುಖಂಡರಾದ ಬಿಎಂ ಮಾಧವ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ನಾಯಕರಾದ ಯೋಗೀಶ್ ಜಪ್ಪಿನಮೊಗರು, ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರೋಹಿದಾಸ್, ರವಿಚಂದ್ರ ಕೊಂಚಾಡಿ, ವಸಂತಿ, ಈಶ್ವರಿ, ರೈತ ನಾಯಕರಾದ ಸದಾಶಿವದಾಸ್, ಕೃಷ್ಣಪ್ಪ ಸಾಲ್ಯಾನ್, ಡಿವೈಎಫ್‌ಐ ನಾಯಕರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ರಿಝ್ವಾನ್ ಹರೇಕಳ, ಎಸ್‌ಎಫ್‌ಐ ನಾಯಕ ರಾದ ವಿನುಷ ರಮಣ, ಸಾಮಾಜಿಕ ಕಾರ್ಯಕರ್ತರಾದ ಪ್ಲೇವಿಕ್ರಾಸ್ತಾ ಅತ್ತಾವರ, ಮೀನಾ ಟೆಲ್ಲಿಸ್,ಬಿಎನ್ ದೇವಾಡಿಗ ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News