ಮಂಗಳೂರು: ಕೊಲೆ ಪ್ರಕರಣ; ಆರೋಪಿಗೆ ಜೀವಾವಧಿ ಶಿಕ್ಷೆ, ದಂಡ

Update: 2023-12-06 17:13 GMT

ಮಂಗಳೂರು : ರಸ್ತೆಯ ವಿಚಾರದಲ್ಲಿ 2020ರ ಫೆ.9ರಂದು ನಡೆದ ಕೊಲೆ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಯೋಗೀಶ (55) ಶಿಕ್ಷೆಗೊಳಗಾದವನು. ಅಲ್ಲಿನ ನಿವಾಸಿ ಉಮೇಶ ಗೌಡ(58) ಕೊಲೆಯಾದವರು.

ಯೋಗೀಶ ಮತ್ತು ಆತನ ಸಹೋದರಿಗೆ ಸೇರಿದ ಜಮೀನಿನಲ್ಲಿದ್ದ ಮಣ್ಣಿನ ರಸ್ತೆಯನ್ನು ನಾಗೇಶ ಮತ್ತು ಅವರ ಕುಟುಂಬದವರು ಅವರ ಮನೆಗೆ ಹೋಗಲು ಕಾಲುದಾರಿಯಾಗಿ ಬಳಸುತ್ತಿದ್ದರು. ಫೆ.9ರಂದು ನಾಗೇಶ ಅವರ ತಾಯಿಯ ಶ್ರಾದ್ಧ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಾಗೇಶ ಅವರ ಸಹೋದರ ಉಮೇಶ ಅವರು ಪತ್ನಿಯೊಂದಿಗೆ ಶ್ರಾದ್ಧ ಕಾರ್ಯಕ್ರಮಕ್ಕೆ ಹೋಗಿದ್ದರು. ಅವರ ಕುಟುಂಬದ ಇತರರು ಕೂಡ ಅದೇ ರಸ್ತೆಯಲ್ಲಿ ತೆರಳಿದ್ದರು. ಅಂದು ರಾತ್ರಿ 9:30ಕ್ಕೆ ಆರೋಪಿ ಯೋಗೀಶ ರಸ್ತೆಯನ್ನು ಬಂದ್ ಮಾಡುವ ಉದ್ದೇಶದಿಂದ ಹಾಲೋಬ್ಲಾಕ್‌ನ್ನು ಅಡ್ಡ ಇಟ್ಟಿದ್ದ ಎನ್ನಲಾಗಿದೆ. ಇದನ್ನು ತಿಳಿದ ನಾಗೇಶ ಮತ್ತು ಸಹೋದರ ಉಮೇಶ, ಅವರ ಪತ್ನಿ ಲೀಲಾವತಿ ಮತ್ತು ಸಹೋದರಿ ವನಜಾ ಅವರು ಆರೋಪಿ ಯೋಗೀಶನ ಬಳಿ ಹೋಗಿ ರಸ್ತೆ ತಡೆ ಮಾಡಿರುವುದನ್ನು ತೆರವುಗೊಳಿಸುವಂತೆ ಹೇಳಿದರು.

ಆಗ ಯೋಗೀಶನ ಜತೆಗಿದ್ದ ಆತನ ಪುತ್ರ ಜೀವನ್ ಎಂಬಾತ ನಾಗೇಶ ಮತ್ತು ಅವರ ಕುಟುಂಬಸ್ಥರನ್ನು ಅವಾಚ್ಯ ಶಬ್ದದಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಅಲ್ಲಿದ್ದ ಕಬ್ಬಿಣದ ಸರಳಿನಲ್ಲಿ ಹಲ್ಲೆಗೆ ಮುಂದಾಗಿದ್ದ. ಆಗ ನಾಗೇಶ ಮತ್ತು ಕುಟುಂಬಸ್ಥರು ಹಲ್ಲೆ ಆಗದಂತೆ ಪ್ರತಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ನಾಗೇಶ ಅವರ ಸಹೋದರಿ ಆರೋಪಿ ಯೋಗೀಶನ ಕೈಯಲ್ಲಿದ್ದ ಕಬ್ಬಿಣದ ಸರಳನ್ನು ಕಸಿದುಕೊಂಡರು. ಆಗ ಯೋಗೀಶ ಹತ್ತಿರದಲ್ಲಿದ್ದ ಶೆಡ್‌ಗೆ ತೆರಳಿ ಚೂರಿಯನ್ನು ತಂದು ಉಮೇಶ ಅವರ ಎದೆಯ ಭಾಗಕ್ಕೆ ಚುಚ್ಚಿ ಗಂಭೀರ ಸ್ವರೂಪದ ಗಾಯಗೊಳಿಸಿದ್ದ. ಉಮೇಶ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಅವರನ್ನು ಉಜಿರೆ ಆಸ್ಪತ್ರೆಗೆ, ಅನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ಬೆಳ್ತಂಗಡಿಯ ಅಂದಿನ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ.ಜಿ ಪ್ರಕರಣದ ತನಿಖೆ ನಡೆಸಿದ್ದರು. ಆರೋಪಿ ಯೋಗೀಶ ನ್ಯಾಯಾಂಗ ಬಂಧನದಲ್ಲಿದ್ದ. ಎರಡನೇ ಆರೋಪಿ ಜೀವನ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಯೋಗೀಶನ ಜಾಮೀನು ಅರ್ಜಿ ಎರಡು ಬಾರಿ ತಿರಸ್ಕೃತಗೊಂಡಿತ್ತು. ಹೀಗಾಗಿ ಕಳೆದ 3 ವರ್ಷ 9 ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿಯೇ ಇದ್ದನು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ ಅವರು ಡಿ.6ರಂದು ಆರೋಪಿ ಯೋಗೀಶನನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ ತೀರ್ಪು ನೀಡಿದರು.

2ನೇ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ. ಯೋಗೀಶನಿಗೆ ಭಾರತೀಯ ದಂಡಸಂಹಿತೆ ಕಲಂ 302ರ ಅಡಿ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಸೂಲಾದ 3 ಲಕ್ಷ ರೂ. ದಂಡವನ್ನು ಉಮೇಶ ಅವರ ಪತ್ನಿ ಲೀಲಾವತಿ ಅವರಿಗೆ ಪರಿಹಾರ ರೂಪದಲ್ಲಿ ಸಂದಾಯ ಮಾಡಲು ಆದೇಶ ನೀಡಿದ್ದಾರೆ. ಅಲ್ಲದೆ ಅವರಿಗೆ ಆರ್ಥಿಕ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News