ಮಂಗಳೂರು: ರಾಜ್ಯ ಜೂನಿಯರ್, ಯೂತ್ ಅಥ್ಲೆಟಿಕ್ಸ್‌ಗೆ ತೆರೆ

Update: 2023-09-30 17:37 GMT

ಮಂಗಳೂರು, ಸೆ.30: ಇಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಶನಿವಾರ ಕೊನೆಗೊಂಡ ರಾಜ್ಯ ಜೂನಿಯರ್ ಮತ್ತು ಯೂತ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ಮತ್ತು ಆತಿಥೇಯ ದಕ್ಷಿಣ ಕನ್ನಡ ಜಿಲ್ಲಾ ತಂಡ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ರಾಜ್ಯ ಮತ್ತು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಗಳು ಮೊಗವೀರ ವ್ಯವಸ್ಥಾಪಕ ಮಂಡಳಿ ಮತ್ತು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಆಶ್ರಯದಲ್ಲಿ ಲೋಕನಾಥ್ ಬೋಳಾರ್ ಸ್ಮರಣಾರ್ಥ ನಡೆದ ಕೂಟದ 23 ಮತ್ತು 18 ವರ್ಷದೊಳಗಿನವರ ವಿಭಾಗಗಳಲ್ಲಿ ಕ್ರಮವಾಗಿ 102 ಮತ್ತು 228 ಪಾಯಿಂಟ್‌ಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ತಂಡ ಪ್ರಶಸ್ತಿಯನ್ನು ಬಾಚಿಕೊಂಡಿತು. 20, 16 ಮತ್ತು 14 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವು. ಈ ವಿಭಾಗಗಳಲ್ಲಿ ತಂಡಗಳು ಕ್ರಮವಾಗಿ 165, 97 ಮತ್ತು 77 ಪಾಯಿಂಟ್ ಗಳಿಸಿದ್ದವು.

ಕೊನೆಯ ದಿನ ಮಧ್ಯಾಹ್ನ ನಡೆದ 20 ವರ್ಷದೊಳಗಿನ ಮಹಿಳೆಯರ 400 ಮೀ ಹರ್ಡಲ್ಸ್‌ನಲ್ಲಿ ಬೆಂಗಳೂರಿನ ಶ್ರೇಯಾ ರಾಜೇಶ್ ಅವರು ಪ್ರತಿಸ್ಪರ್ಧಿಯನ್ನು 5 ಸೆಕೆಂಡುಗಳಿಂದ ಹಿಂದಿಕ್ಕಿ ಚಿನ್ನ ಗೆದ್ದರು. ಇದರೊಂದಿಗೆ ಒಂದು ದಶಕದ ಹಿಂದಿನ ದಾಖಲೆ ಮುರಿದರು. ಒಟ್ಟು 10 ಹೊಸ ದಾಖಲೆಗಳು ಶನಿವಾರ ನಿರ್ಮಾಣಗೊಂಡವು

ಎರಡನೇ ದಿನ 20 ವರ್ಷದೊಳಗಿನ ಮಹಿಳೆಯರ 100 ಮೀಟರ್ಸ್ ಓಟದ ಚಿನ್ನ ಗೆದ್ದಿದ್ದ ಬೆಂಗಳೂರಿನ ನಿಯೋಲ್ ಅನಾ ಕೋರ್ನೆಲಿ ಅಂತಿಮ ದಿನ 200 ಮೀಟರ್ಸ್ ಓಟದಲ್ಲೂ ಅಗ್ರಸ್ಥಾನ ಗಿಟ್ಟಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News