ಮಂಗಳೂರು: ಮೀನು ಸಂಸ್ಕರಣೆಗೆ ಕಲ್ಲಿದ್ದಲು ಬಳಕೆ ವಿರೋಧಿಸಿ ಮನವಿ

Update: 2023-11-03 06:36 GMT

ಮಂಗಳೂರು, ನ.3: ಉಳ್ಳಾಲ ತಾಲೂಕಿನ ಕೋಟೆಪುರ ಸಮುದ್ರ ದಂಡೆ ಮೇಲಿನ ಮೀನು ಸಂಸ್ಕರಣಾ ಕಂಪನಿಯು ಕಲ್ಲಿದ್ದಲು ಬಳಕೆ ಮಾಡುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಡಿವೈಎಫ್ಐ ಜಿಲ್ಲಾ ಸಮಿತಿಯು ಸ್ಥಳೀಯಾಡಳಿತ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಮೀನಿನ ಸಂಸ್ಕರಣೆಗೆ ಕಂಪನಿಯವರು ಕಲ್ಲಿದ್ದಲು ಬಳಕೆ ಮಾಡುವುದರಿಂದ ಪರಿಸರದಲ್ಲಿ ಹಾರುಬೂದಿ ಹರಡಿ ಜನರ ಆರೋಗ್ಯಕ್ಕೆ ಸಮಸ್ಯೆ ಉಂಟಾಗಿದೆ. ಜನರ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿದ್ದು, ಸಣ್ಣ ಮಕ್ಕಳಲ್ಲಿ ಅಸ್ತಮಾ ಕಾಯಿಲೆ ಗೋಚರಿಸುತ್ತಿದೆ. ಚರ್ಮ ರೋಗಕ್ಕೂ ಜನರು ತುತ್ತಾಗುತ್ತಿದ್ದಾರೆ. ಕಣ್ಣಿನ ಅಲರ್ಜಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಕಂಪನಿಯ ಒಳಗೆ ಇರುವ ಕಾರ್ಮಿಕರಿಗೂ ಯಾವುದೇ ಸುರಕ್ಷಾ ಕ್ರಮಗಳಿಲ್ಲದೆ ಅವರಿಗೂ ಚರ್ಮದ ಕಾಯಿಲೆ ಕಾಣಿಸಿಗೊಂಡಿವೆ. ಹೊರರಾಜ್ಯದ ಕಾರ್ಮಿಕರನ್ನು ಇಲ್ಲಿ ಕೆಲಸಕ್ಕೆ ಬಳಸುತ್ತಿರುವುದರಿಂದ ಯಾವುದೇ ವಿಚಾರ ಬೆಳಕಿಗೆ ಬರುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ನೇತೃತ್ವದ ನಿಯೋಗ ಸಲ್ಲಿಸಿರುವ ಮನವಿಯಲ್ಲಿ ದೂರಲಾಗಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಸಮಿತಿಯ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಉಳ್ಳಾಲ ತಾಲೂಕು ಸಮಿತಿ ಕಾರ್ಯದರ್ಶಿ ರಿಜ್ವಾನ್ ಹರೇಕಳ, ಕೋಟೆಪುರ- ಕೋಡಿ ಘಟಕದ ಅಧ್ಯಕ್ಷ ಇಮ್ರಾನ್ ಕೋಟೆಪುರ ಉಪಸ್ಥಿತರಿದ್ದರು.

ಫಿಶ್ ಮೀಲ್ ಗಳ ಮಾಲಿನ್ಯದ ವಿರುದ್ಧ ನಿರಂತರ ಆರೋಪ:

ಫಿಶ್ ಮೀಲ್ ಗಳಿಂದ ವಾಯು ಮಾಲಿನ್ಯದ ತೊಂದರೆಯ ಬಗ್ಗೆ ಆಗಾಗ್ಗೆ ಸ್ಥಳೀಯರಿಂದ ಆರೋಪ, ದೂರುಗಳು ಸಲ್ಲಿಕೆಯಾಗುತ್ತಿರುತ್ತವೆ. ಈ ನಡುವೆ,ಜಲ ಮತ್ತು ವಾಯು ಸಂರಕ್ಷಣೆ ಹಾಗೂ ನಿಯಂತ್ರಣಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಲ್ಲಿ 2022ರ ಆಗಸ್ಟ್ ನಲ್ಲಿ ಉಳ್ಳಾಲ ಮತ್ತು ಮುಕ್ಕದಲ್ಲಿ ಕಾರ್ಯಾಚರಿಸುತ್ತಿದ್ದ 16 ಫಿಶ್ ಮೀಲ್ ಕಾರ್ಖಾನೆಗಳನ್ನು ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿತ್ತು. ಆ ಸಂದರ್ಭದಲ್ಲಿ ಆದೇಶವನ್ನು ಪ್ರಶ್ನಿಸಿ ಫಿಶ್ ಮೀಲ್ ಗಳ ಮಾಲಕರು ಹೈಕೋರ್ಟ್ ಮೊರೆ ಹೋಗಿದ್ದರು.

ಕಳೆದ ವರ್ಷ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಉಳ್ಳಾಲ ಮತ್ತು ಮುಕ್ಕ ಪರಿಸರದಲ್ಲಿ ಕಾರ್ಯಾಚರಿಸುತ್ತಿದ್ದ 16 ಫಿಶ್ ಮೀಲ್ ಗಳನ್ನು ಮುಚ್ಚಲು ಆದೇಶ ನೀಡಿದ ಕುರಿತಂತೆ ಮಾಲಕರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ತಡೆ ತಂದಿದ್ದರು. ಈ ಸಂದರ್ಭ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶವನ್ನು ಶೋಕಾಸ್ ನೋಟೀಸು ಆಗಿ ಪರಿಗಣಿಸುವವಂತೆ ಹೈಕೋರ್ಟ್ ತಿಳಿಸಿತ್ತಲ್ಲದೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆಗೆ ಅವಕಾಶ ನೀಡಿ ನಿಯಮಗಳ ಪಾಲನೆಗೆ ಕಾಲಾವಕಾಶ ನೀಡುವಂತೆ ಕೋರ್ಟ್ ಆದೇಶಿಸಿತ್ತು. ಅದರ ಪ್ರಕಾರ ಹಂತ ಹಂತವಾಗಿ ಫಿಸ್ ಮೀಲ್ ಮಾಲಕರನ್ನು ಕರೆಸಿ ಮೌಖಿಕ ವಿಚಾರಣೆಯ ಮೂಲಕ ಅವರ ಲೋಪದೋಷಗಳನ್ನು ಅವರಿಗೆ ತಿಳಿಸಿ, ಅದನ್ನು ಅಗತ್ಯ ಹಾಗೂ ಸೂಕ್ತ ಕ್ರಮ ಕೈಗೊಳ್ಳಲು ಕಾಲಾವಕಾಶ ನೀಡಲಾಗಿದೆ. ಸಿಆರ್ ಝಡ್ (ಕರಾವಳಿ ನಿಯಂತ್ರಣ ವಲಯ)ನಡಿ ಪ್ರಮಾಣಪತ್ರವನ್ನು ಅವರು ಪಡೆದಿಲ್ಲ ಎಂಬದು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮುಖ ಆಕ್ಷೇಪವಾಗಿತ್ತು. ವಿಚಾರಣೆಯ ಸಂದರ್ಭ ಫಿಶ್ ಮೀಲ್ ನಲ್ಲಿ ಉತ್ಪತ್ತಿಯಾಗುವ ದುರ್ವಾಸನೆ ನಿಯಂತ್ರಿಸಲು ಬಯೋ ಫಿಲ್ಟರ್ ಗಳ ಅಳವಡಿಕೆ, ಮೀನಿನ ದ್ರವ್ಯ ತ್ಯಾಜ್ಯವನ್ನು ಸಂಸ್ಕರಣೆಗೆ ಅಗತ್ಯ ಯಂತ್ರೋಪಕರಣಗಳ ಅಳವಡಿಕೆ ಸೇರಿದಂತೆ ಹಲವು ನಿರ್ದೇಶಗಳನ್ನು ಮೌಖಿಕ ವಿಚಾರಣೆ ಮೇಲೆ ನೀಡಲಾಗಿದೆ ಎಂದು ಮಂಗಳೂರಿನಪ್ರಾದೇಶಿಕ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಡಾ. ರವಿ ಡಿ.ಆರ್. ಪ್ರತಿಕ್ರಿಯಿಸಿದ್ದಾರೆ.

‘‘ಫಿಶ್ ಮೀಲ್ ಗಳ ಮಾಲಕರನ್ನು ಕರೆಸಿ ಮೌಖಿಕವಾಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನೀಡಲಾದ ನಿರ್ದೇಶನಗಳಂತೆ ಹಂತ ಹಂತವಾಗಿ ಅನುಷ್ಟಾನಗೊಳಿಸುವ ಕಾರ್ಯ ಕಂಪನಿಗಳಿಂದ ನಡೆಯುತ್ತಿದೆ. ಬಯೋ ಫಿಲ್ಟರ್ ಸೇರಿದಂತೆ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿ ಯಂತ್ರೋಪಕರಣಗಳ ಅಳವಡಿಕೆಯು ಬಹುದೊಡ್ಡ ಹೂಡಿಕೆ ಆಗಿರುವುದರಿಂದ ಕಂಪನಿಯವರು ಹಂತ ಹಂತವಾಗಿ ಅವುಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ವಾಯು ಮಾಲಿನ್ಯ (ದುರ್ವಾಸನೆ) ತಡೆಯಲು ಕಲ್ಲಿದ್ದಲು ಮತ್ತು ತೆಂಗಿನ ಸಿಪ್ಪೆ ಬಳಸುವಂತೆ ನಿರ್ದೇಶಿಸಲಾಗಿದೆ. ಮೀನು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳಲ್ಲಿ ಸಹಜವಾಗಿಯೇ ಒಂದು ತೆರನಾದ ವಾಸನೆ ಸಹಜ. ಆದರೆ ಅದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಕಂಪನಿಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿ ನಿಗಾ ಇರಿಸುತ್ತಿದ್ದೇವೆ .’’

-ಡಾ. ರವಿ ಡಿ.ಆರ್., ಪ್ರಾದೇಶಿಕ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ, ಮಂಗಳೂರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News