ಮಂಗಳೂರು| ಖಾಸಗಿ ಬಸ್ ಚಾಲಕ, ನಿರ್ವಾಹಕರ ಹೊಡೆದಾಟ ಪ್ರಕರಣ: ದೂರು-ಪ್ರತಿದೂರು ದಾಖಲು
ಮಂಗಳೂರು: ನಗರದ ಕಂಕನಾಡಿ ಸಿಗ್ನಲ್ ವೃತ್ತದ ಬಳಿ ಅ.10ರಂದು ನಡೆದ ಎರಡು ಖಾಸಗಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರ ನಡುವೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಸೆಲೆನಾ ಬಸ್ ನಿರ್ವಾಹಕ ಭುವನೇಶ್ವರ ಬಿ.ವಿ ನೀಡಿದ ದೂರಿನಂತೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ವಿಟ್ಲಕ್ಕೆ ಹೋಗುತ್ತಿರುವಾಗ ಬೆಳಗ್ಗೆ 8.15ಕ್ಕೆ ಕಂಕನಾಡಿ ಸಿಗ್ನಲ್ ನಲ್ಲಿ ಧರಿತ್ರಿ ಬಸ್‌ನ್ನು ತಮ್ಮ ಬಸ್ಸಿಗೆ ಅಡ್ಡ ನಿಲ್ಲಿಸಿ ಅದರ ಚಾಲಕ ಸುರೇಶ್ ಹಾಗೂ ನಿರ್ವಾಹಕ ರಾಕೇಶ್ ಎಂಬವರು ತಮ್ಮ ಬಸ್ಸಿನ ಒಳಗಡೆ ಬಂದು ಅವಾಚ್ಯವಾಗಿ ಬೈಯ್ದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಧರಿತ್ರಿ ಬಸ್ಸು ಚಾಲಕ ಧರ್ಮಸ್ಥಳ ಸುರೇಶ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನಂತೆ ಸೆಲಿನಾ ಬಸ್ಸು ಕಂಡಕ್ಟರ್ ಭುವನೇಶ್ವರ್ ಜ್ಯೋತಿ ಸರ್ಕಲ್ ಬಳಿ ಅವಾಚ್ಯ ಶಬ್ದಗಳಿಂದ ಬೈಯ್ದು ಎಂಜಿಲು ಉಗಿಲಿದ್ದು, ಕಂಕನಾಡಿ ಸಿಗ್ನಲ್ ಬಳಿ ತಮ್ಮ ಬಸ್ಸಿಗೆ ಅಡ್ಡಲಾಗಿ ಬಸ್ಸು ನಿಲ್ಲಿಸಿ ತನಗೆ ಮತ್ತು ಬಸ್ಸು ನಿರ್ವಾಹಕ ರಾಕೇಶ್‌ಗೆ ಗಾಡಿ ತೊಳೆಯುವ ಬ್ರಸ್‌ನಿಂದ ಹಲ್ಲೆ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.