ಮಂಗಳೂರು: ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ; ಉಪನ್ಯಾಸಕನಿಗೆ ಜೀವಾವಧಿ ಶಿಕ್ಷೆ, ದಂಡ

Update: 2023-07-26 17:14 GMT

ಮಂಗಳೂರು, ಜು.26: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಅನೈಸರ್ಗಿಕ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಉಪನ್ಯಾಸಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಎಫ್‌ಟಿಎಸ್‌ಸಿ-1) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕುಳಾಯಿಯ ಪೃಥ್ವಿರಾಜ್ (33) ಶಿಕ್ಷೆಗೊಳಗಾದವನು. ಈತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೋರ್ವನಿಗೆ 2014ರ ಆ.1ರಿಂದ 2016ರ ಸೆ.2ರವರೆಗೆ ಅನೈಸರ್ಗಿಕ ರೀತಿಯ ಲೈಂಗಿಕ ಕ್ರಿಯೆ ಮೂಲಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೃಥ್ವಿರಾಜ್ ವಿದ್ಯಾರ್ಥಿಯನ್ನು ತನ್ನ ಮನೆಗೆ ಕರೆಯಿಸಿ ನಿರಂತರವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಯಾರಿಗಾದರೂ ಹೇಳಿದರೆ ಬಿಡುವುದಿಲ್ಲ, ಪರೀಕ್ಷೆಯಲ್ಲಿ ಅಂಕ ಕಡಿತ ಮಾಡುತ್ತೇನೆ. ಹಾಜರಾತಿ ಕಡಿತ ಮಾಡುತ್ತೇನೆ ಎಂದು ಹೆದರಿಸಿದ್ದ. ಬಾಲಕನ ಜನನಾಂಗದಲ್ಲಿ ಗಾಯವಾಗಿ ವೈದ್ಯರಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ಪಡೆಯುವ ವೇಳೆ ಬಾಲಕ ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಮನೆಯವರು ಮತ್ತು ವೈದ್ಯರಿಗೆ ತಿಳಿಸಿದ್ದ.

ಸುರತ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಚೆಲುವರಾಜ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 

ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು, ಆರೋಪಿಯ ಅಪರಾಧ ದೃಢಪಟ್ಟಿರುವುದರಿಂದ ಆರೋಪಿ ತಪ್ಪಿತಸ್ಥನೆಂದು ತೀರ್ಪು ನೀಡಿ ಬುಧವಾರದಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ಆರೋಪಿಗೆ ಪೊಕ್ಸೋ ಕಾಯಿದೆ ಸೆಕ್ಷನ್ 6ರಡಿ ಜೀವಾವಧಿ ಶಿಕ್ಷೆ ಮತ್ತು 25,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಕಠಿಣ ಸಜೆ, ಪೋಕ್ಸೋ ಸೆಕ್ಷನ್ 10ರಂತೆ 5 ವರ್ಷ ಸಾದಾ ಸಜೆ, 5,000 ರೂ. ದಂಡ ಮತ್ತು ದಂಡ ಪಾವತಿಸಲು ತಪ್ಪಿದರೆ 3 ತಿಂಗಳ ಸಾದಾ ಸಜೆ, ಐಪಿಸಿ ಸೆಕ್ಷನ್ 377ರಡಿ 10 ವರ್ಷ ಕಠಿಣ ಸಜೆ, 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಕಠಿಣ ಸಜೆ, ಐಪಿಸಿ 506ರಡಿ 1 ವರ್ಷ ಸಾದಾ ಸಜೆ, 1,000 ರೂ. ದಂಡ, ದಂಡ ಪಾವತಿಸದಿದ್ದರೆ ಹೆಚ್ಚುವರಿ 1 ತಿಂಗಳು ಹೆಚ್ಚುವರಿ ಸಾದಾ ಸಜೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತ ಬಾಲಕನಿಗೆ ರಾಜ್ಯ ಸರ್ಕಾರ 1 ಲ.ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News