ಮಂಗಳೂರು: ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರ ಸೆರೆ

Update: 2023-11-06 16:00 GMT

ಮಂಗಳೂರು : ಮಾದಕ ವಸ್ತು ‘ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 95 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೊಯಿನೂರು ರಸ್ತೆಯ ಪ್ರಮೋದ್ ಎಂ.ಜಿ. ಡಿಸ್ಕ್ (30), ಮಡಿಕೇರಿಯ ಕಾನ್ವೆಂಟ್ ಜಂಕ್ಷನ್‌ನ ರಾಶೀದ್ ಎಂ.ಝಡ್ ಯಾನೆ ರಾಶಿ (41), ಮಡಿಕೇರಿಯ ಕಡಗದಾಳು ಗ್ರಾಮದ ದರ್ಶನ್ ಎಸ್.(24) ಬಂಧಿತ ಆರೋಪಿಗಳಾಗಿದ್ದಾರೆ.

ನಗರದ ಪಳ್ನೀರು ಬಳಿಯ ಲಾಡ್ಜ್‌ವೊಂದರಲ್ಲಿ ಮೂವರು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಸೋಮವಾರ ದಾಳಿ ನಡೆಸಿ ಬಂಧಿಸಿದರು. ಆರೋಪಿಗಳಿಂದ 75 ಸಾವಿರ ರೂ. ಮೌಲ್ಯದ 15 ಗ್ರಾಂ ನಿಷೇಧಿತ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್‌ಗಳನ್ನು ವಶಪಡಿಸಿದ್ದಾರೆ.

ಆರೋಪಿತರಲ್ಲಿ ಪ್ರಮೋದ್ ಎಂಜಿ ಡಿಸ್ಕ್ ಎಂಬಾತನ ಮೇಲೆ ಸುಳ್ಯ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಮಂಗಳೂರು ನಗರದ ಬರ್ಕೆ ಠಾಣೆಯಲ್ಲಿ ಕೊಲೆಯತ್ನ ಹಾಗೂ ಮಡಿಕೇರಿ ನಗರ ಠಾಣೆಯಲ್ಲಿ ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿವೆ.  ರಾಶೀದ್ ಎಂ.ಝಡ್ ಯಾನೆ ರಾಶಿ ಎಂಬಾತನ ಮೇಲೆ ಮಡಿಕೇರಿ ಜಿಲ್ಲೆಯ ಭಾಗಮಂಡಲ ಠಾಣೆಯಲ್ಲಿ ದರೋಡೆ ಹಾಗೂ ಮಡಿಕೇರಿ ನಗರ ಠಾಣೆಯಲ್ಲಿ ಕೊಲೆ, ದರೋಡೆ, ಸುಲಿಗೆ ಪ್ರಕಣಗಳು ದಾಖಲಾಗಿರುತ್ತವೆ. ದರ್ಶನ್ ಎಸ್. ಎಂಬಾತನ ಮೇಲೆ ಮಡಿಕೇರಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್‌ರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ ನೇತೃತ್ವದ ತಂಡ ಆರೋಪಿಗಳ ಪತ್ತೆ ಕಾರ್ಯಾ ಚರಣೆಯಲ್ಲಿ ಭಾಗಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News