ಮಂಗಳೂರು| ಸಾರ್ವಜನಿಕ ಸ್ಥಳದಲ್ಲಿ ಧೂಮಪಾನದ ವಿರುದ್ಧ ಕಾರ್ಯಾಚರಣೆ; 51 ಪ್ರಕರಣ ದಾಖಲು
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದ ವಿರುದ್ಧ ಜಂಟಿಕಾರ್ಯಾಚರಣೆ ನಡೆಸಿದ ಆರೋಗ್ಯ ಮತ್ತು ಪೊಲೀಸ್ ತಂಡವು 51 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿದೆ.
ನಗರದ ಫಳ್ನೀರ್, ಅತ್ತಾವರ, ಹಂಪನಕಟ್ಟೆ, ಆರ್‌ಟಿಒ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿದ ತಂಡವು ಹೊಟೇಲ್, ಕೆಫೆ, ಟೀ ಸ್ಟಾಲ್, ಅಂಗಡಿ ವಠಾರ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಸಿಗರೇಟ್ ಸೇದುತ್ತಿದ್ದವರಿಗೆ ತಲಾ 200ರೂ. ದಂಡ ವಿಧಿಸಿದೆ.
ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಕಾಯ್ದೆಯ (ಕೊಪ್ಟಾ)ಅನ್ವಯ ಸಿಗರೇಟ್ ಪ್ಯಾಕ್ ಮಾರಾಟ ಮಾಡಬೇಕಿದೆ. ಬಿಡಿಯಾಗಿ ಸಿಗರೇಟ್ ಮಾರಲು ಅವಕಾಶವಿಲ್ಲ. ಹಾಗಾಗಿ ಬಿಡಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಅಂಗಡಿ, ಕೆಫೆಗಳಿಗೆ ತೆರಳಿ ಪರಿಶೀಲನೆ ನಡೆಸಿ ದಂಡ ವಿಧಿಸಲಾಯಿತು. ಅದಲ್ಲದೆ ಶಾಲಾ-ಕಾಲೇಜುಗಳ 100 ಮೀ. ವ್ಯಾಪ್ತಿಯಲ್ಲಿ ಸಿಗರೇಟ್ ಸಹಿತ ಧೂಮಪಾನ ವಸ್ತುಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ದಂಡ ವಿಧಿಸಲಾಯಿತು.
ಮುಂದಿನ ದಿನಗಳಲ್ಲಿ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಈಗಾಗಲೇ ದಂಡ ವಿಧಿಸಿರುವ ಅಂಗಡಿ, ಕೆಫೆಗಳಲ್ಲಿ ಪ್ರಕರಣ ಪುನರಾವರ್ತನೆಯಾದರೆ ಅದರ ವ್ಯಾಪಾರ ಪರವಾನಿಗೆ ರದ್ದುಗೊಳಿಸಲು ಮಹಾನಗರಪಾಲಿಕೆಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯರ ಮಾರ್ಗದರ್ಶನದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತಂಡದ ಪುಂಡಲೀಕ ಲಕಾಟೆ, ಶೃತಿ ಹಾಗೂ ಪಾಂಡೇಶ್ವರ ಠಾಣೆಯ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.