ಮಂಗಳೂರು| ಬಿಜೆಪಿ ಮುಖಂಡನಿಂದ ಹಫ್ತ ವಸೂಲಿ: ವಿಕಲಚೇತನ ಬೀದಿಬದಿ ವ್ಯಾಪಾರಿ ಆರೋಪ

Update: 2024-11-22 17:45 GMT

ಮಂಗಳೂರು: ನಗರದ ಪಡೀಲ್ ಮುಖ್ಯ ರಸ್ತೆಯ ಬಳಿ ಕೆಲವು ವರ್ಷದಿಂದ ಹೂವು ಮಾರಿ ಜೀವನ ಸಾಗಿಸುತ್ತಿರುವ ತನಗೆ ಮಾಜಿ ಕಾರ್ಪೊರೇಟರ್, ಬಿಜೆಪಿ ಮುಖಂಡ ವಿಜಯ ಕುಮಾರ್ ಶೆಟ್ಟಿ ಹಫ್ತಾ ವಸೂಲಿ ಮಾಡಿ ತೊಂದರೆ ನೀಡುತ್ತಿದ್ದಾರೆ ಎಂದು ವಿಕಲಚೇತನ ಹಾಗೂ ಬೀದಿಬದಿ ವ್ಯಾಪಾರಿ ಚಂದ್ರಹಾಸ್ ಪೂಜಾರಿ ಆರೋಪಿಸಿದ್ದಾರೆ.

ಪಡೀಲ್ ಬಳಿ ಗೂಡಂಗಡಿಯಲ್ಲಿ ಹೂವು ಮಾರಿಕೊಂಡು ತಾನು ಬೀದಿ ವ್ಯಾಪಾರ ನಡೆಸುತ್ತಿರುವೆ. ಕೆಲವು ದಿನದಿಂದ ವಿಜಯ ಕುಮಾರ್ ಶೆಟ್ಟಿಯು ಈ ಅಂಗಡಿಯನ್ನು ತೆರವುಗೊಳಿಸಲು ಒತ್ತಡ ಹಾಕುತ್ತಿದ್ದಾರೆ. ಹಫ್ತಾ ವಸೂಲಿಗೆ ಒತ್ತಡ ಹಾಕುತ್ತಿದ್ದಾರೆ. ತನಗೆ ರಕ್ಷಣೆ ನೀಡಬೇಕು ಮತ್ತು ಹೂವು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಚಂದ್ರಹಾಸ ಪೂಜಾರಿ ಮನವಿ ಮಾಡಿದ್ದಾರೆ.

ವಿಜಯ ಕುಮಾರ್ ಶೆಟ್ಟಿ ಮತ್ತಾತನ ಹೆಸರಲ್ಲಿ ಹಿಂಬಾಲಕರು ಹಫ್ತಾ ವಸೂಲಿ ಮಾಡುತ್ತಿರುವ ಬಗ್ಗೆ ಚಂದ್ರಹಾಸ ಪೂಜಾರಿ ವೀಡಿಯೋ ಮೂಲಕ ಚಿತ್ರಿಸಿದ ಹೇಳಿಕೆಯ ಆರೋಪದ ಹಿನ್ನೆಲೆಯಲ್ಲಿ ಡಿವೈಎಫ್‌ಐ ನಿಯೋಗವು ಚಂದ್ರಹಾಸ ಪೂಜಾರಿ ಯನ್ನು ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಆವಾಗ ತಾನು ಎದುರಿಸುತ್ತಿರುವ ಸಮಸ್ಯೆಗಳನ್ನು ಚಂದ್ರಹಾಸ ಪೂಜಾರಿ ಹೇಳಿಕೊಂಡಿದ್ದಾರೆ.

ಚಂದ್ರಹಾಸ ಪೂಜಾರಿ ಶೇ.75 ಅಂಗವೈಕಲ್ಯ ಹೊಂದಿರುತ್ತಾರೆ. ತನ್ನ ಎರಡೂ ಕಾಲುಗಳಲ್ಲಿ ಬಲ ಕಳೆದುಕೊಂಡು ನಡೆದಾಡದ ಸ್ಥಿತಿಯಲ್ಲಿದ್ದಾರೆ. ಬಿಜೆಪಿಯ ಮಾಜಿ ಕಾರ್ಪೊರೇಟರ್ ಹಫ್ತಾ ವಸೂಲಿಗೆ ಮುಂದಾಗಿರುವುದು ಖಂಡನೀಯ. ಈ ಅನ್ಯಾಯದ ವಿರುದ್ಧ ವೀಡಿಯೋ ಮೂಲಕ ಚಂದ್ರಹಾಸ ಪೂಜಾರಿ ಅಳಲು ತೋಡಿಕೊಂಡದ್ದರಿಂದ ಹತಾಶೆಗೊಡ ವಿಜಯ ಕುಮಾರ್ ಶೆಟ್ಟಿ ಮತ್ತಿತರರು ಠಾಣೆಗೆ ಕರೆಸಿ ಮಟ್ಕಾ ಕೇಸಿನಲ್ಲಿ ಸಿಲುಕಿಸಿ ಕೇಸು ದಾಖಲಿಸಿ ಬೇರೆ ಬೇರೆ ರೀತಿಯ ಜೀವ ಬೆದರಿಕೆಯನ್ನು ಒಡ್ಡುತ್ತಿರುವುದು ಖಂಡನೀಯ. ಹಾಗಾಗಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿವೈಎಫ್‌ಐ ಒತ್ತಾಯಿಸಿದೆ.

ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರ ಅಧ್ಯಕ್ಷ ಜಗದೀಶ್ ಬಜಾಲ್, ದೀಪಕ್ ಬಜಾಲ್, ವರಪ್ರಸಾದ್ ನಿಯೋಗದಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News