ಮಂಗಳೂರು: ಮತಪತ್ರದ ಮೂಲಕ ಸಾರ್ವತ್ರಿಕ ಚುನಾವಣೆಗೆ ಆಗ್ರಹಿಸಿ ಹಕ್ಕೊತ್ತಾಯ, ಧರಣಿ

Update: 2024-01-30 07:37 GMT

ಮಂಗಳೂರು, ಜ.30: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಯಂತ್ರದ ದುರ್ಬಳಕೆ ತಪ್ಪಿಸಲು ಮತ್ತು ಮತ ಪತ್ರದ ಮೂಲಕ ಚುನಾವಣೆ ನಡೆಸಲು ಆಗ್ರಹಿಸಿ ಇಂದು ದ.ಕ. ಜಿಲ್ಲಾ ಅಹಿಂದ ಚಳವಳಿ ಮತ್ತು ಸಹ ಸಂಘಟನೆಗಳ ನೇತೃತ್ವದಲ್ಲಿ ಹಕ್ಕೊತ್ತಾಯ ಮತ್ತು ಧರಣಿ ಸತ್ಯಾಗ್ರಹ ನಗರದ ಮಿನಿ ವಿಧಾನ ಸೌಧದ ಬಳಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, 'ಚುನಾವಣೆಯಲ್ಲಿ ಬಳಸುವ ಮತಯಂತ್ರ ವ್ಯವಸ್ಥೆಯನ್ನು ಬದಲಾಯಿಸಬೇಕು. ಚುನಾವಣೆ ನ್ಯಾಯಸಮ್ಮತವಾಗಿ ನಡೆಯಬೇಕು. ಇದಕ್ಕಾಗಿ ಜನ ಪ್ರತಿನಿಧಿಗಳು ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕಾನೂನನ್ನು ರಚನೆ ಮಾಡಬೇಕಾಗಿದೆ. ಅವರು ತಮ್ಮ ರಾಜಕೀಯ ಪಕ್ಷದ, ಕುಲದ, ವರ್ಗದ ಭಾವನೆಗಳನ್ನು ನಮ್ಮ ಮೇಲೆ ಹೇರುವುದು ಬೇಡ ಎಂದರು.

ಈ ದೇಶ ಹೇಗಿರಬೇಕೆಂದು ತೀರ್ಮಾನ ಮಾಡುವವರು ಈ ದೇಶದ ಮತದಾರರು. ಬಹುಸಂಸ್ಕೃತಿಯನ್ನು ಹೊಂದಿರುವ ಭಾರತವನ್ನು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಒಟ್ಟು ಸೇರಿ ಕಟ್ಟಿದ್ದಾರೆ. ಸಂವಿಧಾನವನ್ನು ಒಪ್ಪಿಕೊಂಡು ಈ ದೇಶದಲ್ಲಿ ಬದುಕುತ್ತಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆ ತರುವುದು ಬೇಡ ಎಂದು ಎಚ್ಚರಿಸಿದರು.

ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಮಂದಿ ತಮ್ಮ ಆಲೋಚನೆಗಳನ್ನು ಬದಲಾಯಿಸಬೇಕು. ಮತಯಂತ್ರದ ಬದಲಿಗೆ ಮತಪತ್ರದ ಮೂಲಕ ನಮ್ಮ ಭಾವನೆಯನ್ನು ಮತ್ತು ಆಲೋಚನೆಯನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು.ಮುಂದೆ ಬರುವ ಸಾರ್ವತ್ರಿಕ ಚುನಾವಣೆಯಲ್ಲಿಯೇ ಮತಪತ್ರದ ಮೂಲಕ ಮತದಾನದ ವ್ಯವಸ್ಥೆ ಜಾರಿಯಾಗಲಿ ಎಂದು ಸರಕಾರವನ್ನು ಆಗ್ರಹಿಸಿದರು.

ವಕೀಲ ಬಿ.ಎ.ಮುಹಮ್ಮದ್ ಹನೀಫ್ ಮಾತನಾಡಿ, ಇದೊಂದು ಸಾಂಕೇತಿಕ ಪ್ರತಿಭಟನೆ. ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಮತಯಂತ್ರದ ಬಳಕೆ ವಿರುದ್ಧ ವ್ಯಾಪಕ ಚಳವಳಿ ನಡೆಯುತ್ತಿದೆ. ಇಲ್ಲಿಯೂ ದೊಡ್ಡ ರೀತಿಯಲ್ಲಿ ಪ್ರತಿಭಟನೆ ನಡೆಯಬೇಕು ಎಂದು ಹೇಳಿದರು.

ಮತಯಂತ್ರದ ಮೂಲಕ ಚುನಾವಣೆ ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ. ದುರುಪಯೋಗ ಆಗುತ್ತಿದೆ. ನಮ್ಮ ಹಾಕಿರುವ ಮತ ಯಾರಿಗೆ ಹೋಗುತ್ತದೆ ಎಂದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಜನಜಾಗೃತಿ ಅಗತ್ಯ ಎಂದರು.

ಜಿಪಂ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಅಚ್ಯುತ ಮೂಡುಬಿದಿರೆ ಮತ್ತಿತರರು ಮಾತನಾಡಿದರು.

ಅಹಿಂದ ಜನ ಚಳವಳಿಯ ದ.ಕ. ಜಿಲ್ಲಾಧ್ಯಕ್ಷ ಪದ್ಮನಾಭ ನರಿಂಗಾನ ಧರಣಿಯ ನೇತೃತ್ವ ವಹಿಸಿದ್ದರು.

ಧರಣಿ ಸತ್ಯಾಗ್ರಹದ ಬಳಿಕ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News