ಮಂಗಳೂರು| ಹೆಲ್ಮೆಟ್‌ನಿಂದ ಬಡಿದು ಕೆಎಸ್ಸಾರ್ಟಿಸಿ ‘ಅಶ್ವಮೇಧ’ ಬಸ್‌ನ ಗಾಜಿಗೆ ಹಾನಿ
ಮಂಗಳೂರು: ದ್ವಿಚಕ್ರ ವಾಹನ ಅಡ್ಡ ಬಂದಿರುವ ವಿಚಾರವನ್ನು ಪ್ರಶ್ನಿಸಿದಕ್ಕಾಗಿ ಕೆಎಸ್ಸಾರ್ಟಿಸಿ ‘ಅಶ್ವಮೇಧ’ ಬಸ್‌ನ ಗಾಜಿಗೆ ಹೆಲ್ಮೆಟ್‌ನಿಂದ ಬಡಿದು ಹಾನಿಯನ್ನುಂಟು ಮಾಡಿರುವ ಘಟನೆ ನಗರದ ಅಳಪೆ ಎಂಬಲ್ಲಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್‌ಗೆ ಅಳಪೆ ಬಳಿ ದ್ವಿಚಕ್ರ ವಾಹನ ಅಡ್ಡ ಬಂದಾಗ ಬಸ್‌ನ ಚಾಲಕ ಇದನ್ನು ಪ್ರಶ್ನಿಸಿದ ಎನ್ನಲಾಗಿದೆ.
ಈ ವೇಳೆ ಸಿಟ್ಟಿನಿಂದ ದ್ವಿಚಕ್ರ ವಾಹನ ಸವಾರ ಬಸ್‌ನ ಗಾಜಿಗೆ ಹೆಲ್ಮೆಟ್‌ನಿಂದ ಬಡಿದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಬಸ್ ಚಾಲಕ ಅರುಣ್ ಎಂಬವರ ಕೈಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಶೀಘ್ರ ವಶಕ್ಕೆ: ಪೊಲೀಸ್ ಆಯುಕ್ತರು
ಅಳಪೆ ಬಳಿ ಬಸ್‌ಗೆ ಹಾನಿಯನ್ನುಂಟು ಮಾಡಿ ದ್ವಿಚಕ್ರ ವಾಹನ ಸವಾರ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಪೊಲೀಸರು ಬಸ್ ಚಾಲಕನನ್ನು ವಿಚಾರಿಸಿ, ಬೈಕ್ ಸವಾರನ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಪ್ರಯಾಣಿಸಲು ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.