ಮಂಗಳೂರು: ಬಿಲ್‌ ಮೊತ್ತ ಪಾವತಿಸದೆ ಮೃತದೇಹ ಬಿಟ್ಟುಕೊಡಲೊಪ್ಪದ ಆಸ್ಪತ್ರೆ; ಆರೋಪ

Update: 2023-10-01 10:31 GMT

ಮಂಗಳೂರು, ಅ.1: ಬಿಲ್‌  ಮೊತ್ತ ಪಾವತಿಸದ ಪರಿಶಿಷ್ಟ ಜಾತಿಗೆ ಸೇರಿದ ಮಹಾಬಲ ಎಂಬವರ ಮೃತದೇಹವನ್ನು ನಗರದ ಖಾಸಗಿ ಆಸ್ಪತ್ರೆಯೊಂದು ಬಿಟ್ಟುಕೊಡಲು ನಿರಾಕರಿಸಿರುವುದಾಗಿ ಅರೋಪಿಸಿರುವ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯು ಬಳಿಕ ತಮ್ಮ ಮಧ್ಯಪ್ರವೇಶದಿಂದ ಆಸ್ಪತ್ರೆಯವರು ಮೃತದೇಹ ಬಿಟ್ಟುಕೊಟ್ಟಿದ್ದಾರೆ.

ಉಸಿರಾಟದ ಸಮಸ್ಯೆಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಹಾಬಲ ಒಳರೋಗಿಯಾಗಿ ಮೂರು ದಿನದ ಹಿಂದೆ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರ ತಂಡ ಹೃದಯದಲ್ಲಿ ಸಮಸ್ಯೆಯಿದೆ ಎಂದು ಬೈಪಾಸ್ ಸರ್ಜರಿಯನ್ನೂ ನಡೆಸಿತ್ತು. ಆ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಶನಿವಾರ ಸಂಜೆ 6 ಗಂಟೆಗೆ ಮಹಾಬಲ ಕೊನೆಯುಸಿರೆಳೆದಿದ್ದಾರೆ. ಮಹಾಬಲರಿಗೆ ವಿಮೆ ಎಂದು ತಿಳಿದಿಕೊಂಡ ಆಸ್ಪತ್ರೆಯವರು 5.5 ಲಕ್ಷ ರೂ.ಮೊತ್ತ ಪಾವತಿಸಲು ಒತ್ತಡ ಹಾಕಿದ್ದರು. ವಿಮೆ ಮೊತ್ತದಲ್ಲಿ ಕೇವಲ 1.5 ಲಕ್ಷ ರೂ. ಮಾತ್ರ ಇದ್ದ ಕಾರಣ ಬಾಕಿ ಮೊತ್ತವನ್ನು ಕಟ್ಟದೆ ಮೃತದೇಹ ಬಿಟ್ಟುಕೊಡಲು ನಿರಾಕರಿಸಿದ್ದರು ಎಂದು ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದ್ದಾರೆ.

ಶನಿವಾರ ಸಂಜೆಯಿಂದ ಮೃತದೇಹ ಕೊಡಲು ನಿರಾಕರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ನಿಯೋಗವು ರವಿವಾರ ಬೆಳಗ್ಗೆ ಹೆತ್ತವರೊಂದಿಗೆ ಸೇರಿಕೊಂಡು ಆಸ್ಪತ್ರೆಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿತು. ಕೆಪಿಎಮ್ಇ ಕಾಯ್ದೆಯ ಪ್ರಕಾರ ಯಾವುದೇ ಕಾರಣಕ್ಕೂ ಮೃತದೇಹವನ್ನು ಅಕ್ರಮವಾಗಿ ಬಂಧನದಲ್ಲಿಡಲು ಅವಕಾಶವಿಲ್ಲ. ಸರಕಾರದ ನಿಯಮವನ್ನು ಉಲ್ಲಂಘಿಸಿದರೆ ಹೋರಾಟ ಮಾಡುವುದಾಗಿ ಎಚ್ಚರಿಸಿತ್ತು.  ಬಳಿಕ ಮಹಾಬಲರ ಮೃತದೇಹವನ್ನು ಆಸ್ಪತ್ರೆಯವರು ಹಣ ಪಡೆಯದೆ ವಾರಸುದಾರರಿಗೆ ಬಿಟ್ಟು ಕೊಟ್ಟಿದೆ. ಅದರಂತೆ ಪಕ್ಕಲಡ್ಕ ಯುವಕ ಮಂಡಲದ ಯುವಕರು ತಮ್ಮೂರಿನ ಆಂಬ್ಯುಲೆನ್ಸ್ ನಲ್ಲಿ ಮೃತದೇಹವನ್ನು ಅವರ ಮನೆಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದರು ಎಂದು ಡಿವೈಎಫ್‌ಐ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News