ಮಾಣಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಶಾಲಾ ಮಕ್ಕಳ ಸಂಚಾರಕ್ಕೆ ಅಡಚಣೆ ಆರೋಪ; ಗುತ್ತಿಗೆದಾರರ ವಿರುದ್ಧ ಆಕ್ರೋಶ

Update: 2024-06-01 07:02 GMT

ಬಂಟ್ವಾಳ : ಮಾಣಿ-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯಿಂದಾಗಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಗೆ ಸಂಚಾರ ಕಲ್ಪಿಸುವ ಮುಖ್ಯ ರಸ್ತೆಯ ಬಳಿಯ ದುಸ್ಥಿತಿಯಿಂದಾಗಿ ಶಾಲಾ ಮಕ್ಕಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ಮಾಣಿ ಹಾಸನ ರಾಷ್ಟೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳು ಕಳೆದ ಅದೆಷ್ಟೋ ಸಮಯಗಳಿಂದ ಪ್ರಾರಂಭವಾಗಿದ್ದರೂ, ಈ ತನಕ ವಾಹನ ಸವಾರರಿಗೆ ಯಾವುದೇ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿ ಕೊಡದೇ ಕಾಮಗಾರಿಯ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶಾಲಾ ಶಿಕ್ಷಕ ವರ್ಗ ಹಾಗೂ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಅಭಿವೃದ್ಧಿ ಕಾಮಗಾರಿಯ ವೇಳೆ ರಸ್ತೆಗಳೆಲ್ಲವೂ ಕೆಸರುಮಯವಾಗಿದ್ದು, ತೀರಾ ಹದಗೆಟ್ಟಿದೆ. ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಗೆ ಸಂಚಾರ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಗುಂಡಿ ತೋಡಿ ಸಂಚಾರ ವ್ಯವಸ್ಥೆಯನ್ನು ತಡೆಗಟ್ಟಿದ್ದು, ಇದರಿಂದಾಗಿ ಅತೀ ಹೆಚ್ಚು ಸಂಖ್ಯೆಗಳನ್ನೊಳಗೊಂಡ ಮಾಣಿ ಬಾಲವಿಕಾಸದ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ತುಂಬಾ ಸಮಸ್ಯೆಯಾಗಿದೆ.

ಆದುದರಿಂದ ಮಕ್ಕಳ ಸಂಚಾರಕ್ಕೆ ಸೂಕ್ತ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ತಕ್ಷಣ ಕಲ್ಪಿಸಿಕೊಡಬೇಕು. ಎರಡು ದಿನಗಳಲ್ಲಿ ಶಾಲಾ ಮಕ್ಕಳಿಗೆ ಮುಖ್ಯ ರಸ್ತೆಯ ಮೂಲಕ ಸಂಚಾರ ಯೋಗ್ಯ ವ್ಯವಸ್ಥೆಯನ್ನು ಕಲ್ಪಿಸಿಕೊಡದಿದ್ದರೆ, ಮಕ್ಕಳನ್ನು ರಸ್ತೆಗಿಳಿಸಿ ಪ್ರತಿಭಟನೆ ನಡೆಸಲಾಗುವುದೆಂದು ಶಾಲಾ ಶಿಕ್ಷಕ ವರ್ಗ ಹಾಗೂ ಮಕ್ಕಳ ಪೋಷಕರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News